ಅಕ್ಕಿಆಲೂರಲ್ಲಿ ಯಥೇಚ್ಛ ನೀರು ಪೋಲು

ಅಕ್ಕಿಆಲೂರ: ದಿನೇ ದಿನೆ ಏರುತ್ತಿರುವ ತಾಪಮಾನದಿಂದಾಗಿ ಅಂತರ್ಜಲಮಟ್ಟ ಕುಸಿಯುತ್ತಿದೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗುವ ಸ್ಥಿತಿ ನಿರ್ವಣವಾಗಿದೆ. ಆದರೆ, ಜನರ ನಿಷ್ಕಾಳಜಿಯಿಂದ ಇರುವ ಅಲ್ಪಸ್ವಲ್ಪ ನೀರು ಅನವಶ್ಯಕವಾಗಿ ಪೋಲಾಗುತ್ತಿದೆ.

ಅಂದಾಜು 20 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಸದ್ಯ ಸಾಕಷ್ಟು ಸಮಸ್ಯೆಗಳ ನಡುವೆಯೂ ಗ್ರಾಪಂ ಎರಡು ದಿನಕ್ಕೂಮ್ಮೆ ನೀರು ಸರಬರಾಜು ಮಾಡುತ್ತಿದೆ. ನೀರು ಪೂರೈಕೆಗಾಗಿ 22 ಬೋರ್​ವೆಲ್​ಗಳನ್ನು ಕೊರೆಯಿಸಲಾಗಿದೆ ಮತ್ತು 4 ಬೃಹತ್ ಟ್ಯಾಂಕ್​ಗಳಲ್ಲಿ ನೀರು ಸಂಗ್ರಹಿಸಲಾಗಿದೆ. ಹೀಗಾಗಿ, ಗ್ರಾಮದಲ್ಲಿ ಅಷ್ಟಾಗಿ ನೀರಿನ ಸಮಸ್ಯೆಯಿಲ್ಲ. ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವರು ಮನೆಯಲ್ಲಿ ನೀರು ಸಂಗ್ರಹಿಸಿದ ನಂತರ ನಳವನ್ನು ಬಂದ್ ಮಾಡದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಇದರಿಂದ ನೀರು ಅನವಶ್ಯಕವಾಗಿ ಚರಂಡಿ ಪಾಲಾಗುತ್ತಿದೆ.

ಲಕ್ಷಾಂತರ ರೂ. ಖರ್ಚು: ಸಾರ್ವಜನಿಕರಿಗೆ ನೀರು ಪೂರೈಸುವ ಉದ್ದೇಶದಿಂದ ಸ್ಥಳೀಯ ಗ್ರಾಪಂ ಲಕ್ಷಾಂತರ ರೂ. ವ್ಯಯಿಸಿದೆ. ಹಳೇ ಬೋರ್​ವೆಲ್​ಗಳ ರಿಪೇರಿ ಮತ್ತು ಹೊಸ್ ಬೋರ್​ವೆಲ್ ಕೊರೆಸಿ ಒಟ್ಟು 22 ಬೋರ್​ವೆಲ್​ಗಳ ಮೂಲಕ ನೀರು ಸರಬರಾಜು ಮಾಡುತ್ತಿದೆ. ಸತತ ಬಿಸಿಲಿನ ತಾಪದಿಂದ ಅಂತರ್ಜಲ ಕುಸಿತಗೊಂಡು ಈಗಾಗಲೇ 8 ಬೋರ್​ಗಳು ಸ್ಥಗಿತಗೊಂಡಿವೆ.

ಟ್ಯಾಪ್ ಇಲ್ಲದ ನಳಗಳು: ಗ್ರಾಪಂ ಮಾಹಿತಿ ಪ್ರಕಾರ, ಗ್ರಾಮದ 2,307 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಈ ಪೈಕಿ 1500ಕ್ಕೂ ಹೆಚ್ಚು ನಲ್ಲಿಗಳಿಗೆ ಟ್ಯಾಪ್ ಅಳವಡಿಸಿಲ್ಲ. ಈ ಹಿಂದೆ ಗ್ರಾಮದಲ್ಲಿ ನೀರಿನ ಅಭಾವ ಉಂಟಾದಾಗ ಗ್ರಾಪಂ ಅಧ್ಯಕ್ಷ ಪ್ರದೀಪ ಶೇಷಗಿರಿ ಅವರು ನಳಗಳಿಗೆ ಕಡ್ಡಾಯವಾಗಿ ಟ್ಯಾಪ್ ಅಳವಡಿಸುವಂತೆ ಸೂಚಿಸಿದ್ದರು. ಆದರೆ, ಅದು ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ.

ನೀರು ಸ್ವಲ್ಪ ಪ್ರಮಾಣದಲ್ಲಿ ಬಳಸಿ, ಅನಗತ್ಯ ಪೋಲು ಮಾಡಬೇಡಿ ಎಂದು ಪಟ್ಟಣದಲ್ಲಿ ಬುಧವಾರ ಡಂಗುರ ಹೊಡೆಸಲಾಗಿದೆ. ಆದರೂ ಸಹಕರಿಸದಿದ್ದರೆ, ನೀರು ಪೋಲು ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. | ಪ್ರವೀಣಕುಮಾರ ಬಿಜ್ಜೂರ, ಅಕ್ಕಿಆಲೂರ ಪಿಡಿಒ