ಅಂಬೇಡ್ಕರ್, ಬಾಬೂಜಿ ದಲಿತ ಚಳವಳಿಗಳ ಕಣ್ಣು

ಶಿವಮೊಗ್ಗ: ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಅವರು ದಲಿತ ಚಳವಳಿಗಳ ಎರಡು ಕಣ್ಣುಗಳಿದ್ದಂತೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಬಾಬು ಜಗಜೀವನರಾಮ್ ಅವರ 112ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಇಂದಿಗೂ ದಲಿತರ ಮೇಲಿನ ದೌರ್ಜನ್ಯ ಕಾಣುತ್ತೇವೆ. 100 ವರ್ಷಗಳ ಹಿಂದಿನ ತೀವ್ರತೆ ಎಷ್ಟಿರಬಹುದು ಎಂದು ಊಹಿಸಿದರೆ ಅದರ ಕರಾಳಮುಖದ ಅರಿವಾಗುತ್ತದೆ. ಇಂದು ನಾವು ಹೋರಾಟ ಹಾಗೂ ಚಳವಳಿ ಎಂದು ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವುದು ದೊಡ್ಡದಲ. ಬಾಬು ಜಗಜೀವನರಾಮ್ ಅವರು ತಮ್ಮ ಶಾಲಾ ಹಂತದಲ್ಲೇ ಜಾತೀಯತೆ ಹಾಗೂ ಶೋಷಣೆಗಳ ವಿರುದ್ಧ ತಿರುಗಿ ಬಿದ್ದು ಚಳವಳಿ ನಡೆಸಿದ್ದರು ಎಂದು ಹೇಳಿದರು.

ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಸಚಿವ ಸ್ಥಾನಕ್ಕೇರಿ ದೀರ್ಘಾವದಿ ಕೇಂದ್ರ ಸಚಿವರಾಗಿದ್ದಂತಹ ಏಕೈಕ ವ್ಯಕ್ತಿ ಜಗಜೀವನರಾಮ್ ಅವರು ಉತ್ತಮ ವಾಗ್ಮಿಗಳಾಗಿದ್ದರು. ಅವರು ಮಾಡಿದಂತಹ ಸ್ವಾಗತ ಭಾಷಣ ಮೆಚ್ಚಿ ಬನಾರಸ್ ವಿವಿಯಲ್ಲಿ ಶಿಕ್ಷಣಕ್ಕಾಗಿ ಪ್ರವೇಶ ನೀಡಲಾಯಿತು ಎಂದು ಹೇಳಿದರು.

ಜಿಪಂ ಸಿಇಒ ಕೆ.ಶಿವರಾಮೇಗೌಡ ಮಾತನಾಡಿ, ಅಪಾರ ಅನುಭವ ಮತ್ತು ಬುದ್ಧಿಶಕ್ತಿ ಜಗಜೀವನರಾಮ್ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಿತು. ಆರ್ಥಿಕ ತೊಂದರೆ ಇದ್ದರೂ ವಿದ್ಯಾಭ್ಯಾಸ ತ್ಯಜಿಸಲಿಲ್ಲ. ಸೌಮ್ಯವಾದಿಯಾಗಿ ವ್ಯವಸ್ಥೆಯೊಳಗೆ ಇದ್ದುಕೊಂಡೇ ಸಮಾಜಕ್ಕೆ ಮಾರಕವಾಗಿರುವುದನ್ನು ವಿರೋಧಿಸುತ್ತಿದ್ದರು ಎಂದರು.

ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ.ಕೆ.ತಿಮ್ಮಪ್ಪ ವಿಶೇಷ ಉಪನ್ಯಾಸ ನೀಡಿದರು. ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಇದ್ದರು.

Leave a Reply

Your email address will not be published. Required fields are marked *