ಅಂಬೇಡ್ಕರ್ ನಗರದಲ್ಲಿ ಅನಿಲ ವಾಸ್ತವ್ಯ

ಗದಗ: ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಭಾನುವಾರ ರಾತ್ರಿ ದಲಿತರ ಮನೆಯಲ್ಲಿ ಊಟ ಮತ್ತು ವಾಸ್ತವ್ಯ ಮಾಡಿ ಸ್ಥಳೀಯರ ಸಮಸ್ಯೆ ಆಲಿಸಿದರು. ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ 5ನೇ ವಾರ್ಡ್​ನ ಬೆಟಗೇರಿಯ ಅಂಬೇಡ್ಕರ್ ನಗರದಲ್ಲಿ ವಾಸ್ತವ್ಯಕ್ಕೆ ತೆರಳಿದ ಅನಿಲ ಅವರನ್ನು ಸ್ಥಳೀಯರು, ಮಹಿಳೆಯರು ಸಂಭ್ರಮದಿಂದ ಬರಮಾಡಿಕೊಂಡರು. ಸ್ಥಳೀಯ ಯುವಕರು ಕೈಕುಲುಕಿ ಶುಭಾಶಯ ವಿನಿಮಯ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಕೆಲ ಹೊತ್ತು ನಗರದ ಲಕ್ಷ್ಮಿ ದೇವಿ ದೇವಸ್ಥಾನದ ಮುಂದೆ ಕುಳಿತ ಅನಿಲ ಅವರೊಂದಿಗೆ ಮಹಿಳೆಯರು ಸಮಸ್ಯೆಗಳ ಕುರಿತು ದೂರು ನೀಡಿದರು.

ನಗರದ ನಿವಾಸಿ ನಾಗರಾಜ ಬೈಲಪ್ಪ ದೊಡ್ಡಮನಿ ಅವರ ಮನೆಗೆ ತೆರಳಿ ಕುಟಂಬ ಸದಸ್ಯರೊಂದಿಗೆ ಭೋಜನ ಮಾಡಿದರು. ಮುಖಂಡರಾದ ಮಂಜುನಾಥ ಎಚ್. ಮುಳಗುಂದ, ಅಶೋಕ ಕುಡತಿನಿ ಮತ್ತಿತರರು ಇದ್ದರು.

ಈ ಸಂದರ್ಭದಲ್ಲಿ ನಾಗರಾಜ ಅವರ ಮಗಳು ಮಂಜುಳಾ ಶಿಕ್ಷಕಿ ಆಗುವ ಅಭಿಲಾಷೆ ವ್ಯಕ್ತಪಡಿಸಿದರು. ಅವಳ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ಅನಿಲ ಭರವಸೆ ನೀಡಿದರು. ಊಟದ ನಂತರ ಲಕ್ಷ್ಮಿದೇವಿ ದೇವಸ್ಥಾನದ ಬಳಿ ಜನರೊಂದಿಗೆ ಸ್ಥಳೀಯ ಸಮಸ್ಯೆಗಳ ಕುರಿತು ರ್ಚಚಿಸಿದರು.

ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಆಶ್ರಯ ಮನೆಗಳು ಯಾರಿಗೂ ಸಿಕ್ಕಿಲ್ಲ. ಉದ್ಯಾನ ಅಭಿವೃದ್ಧಿ ಪಡಿಸಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣೆ ಇರುವುದರಿಂದ ನಾವು ನೆನಪಾಗಿದ್ದೇವೆ ಎಂದು ಕೆಲವರು ಕೋಪಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅನಿಲ ಮೆಣಸಿನಕಾಯಿ, ಸಮಸ್ಯೆಗಳನ್ನು ಸಂಬಂಧಿಸಿದವರ ಗಮನಕ್ಕೆ ತಂದು ಕೆಲಸ ಮಾಡಿಸುವುದು ನನ್ನ ಜವಾಬ್ದಾರಿ ಎಂದು ಭರವಸೆ ನೀಡಿದರು.

ಸೋಮವಾರ ಬೆಳಗ್ಗೆ ಚಹಾ ಸೇವಿಸಿ ಅಂಬೇಡ್ಕರ್ ನಗರದ ಪ್ರತಿ ಮನೆಗೆ ಭೇಟಿ ನೀಡಿದರಲ್ಲದೇ, ಲೋಕಸಭೆ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ನೀಡಬೇಕೆಂದು ಮನವಿ ಮಾಡಿದರು.</