ಕಡೂರು: ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದ ಕಾಂಗ್ರೆಸ್ ಈಗ ಸುಳ್ಳನ್ನೇ ಸತ್ಯವಾಗಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಹಾವೇರಿ ನಿವೃತ್ತ ತಹಸೀಲ್ದಾರ್ ದ್ಯಾಮಣ್ಣ ಗವಿಸಿದ್ದಪ್ಪ ತಿಳಿಸಿದರು.
ಸಂವಿಧಾನ ಸಮ್ಮಾನ್ ಅಭಿಯಾನದ ಅಂಗವಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಅವರ ಮನೆಯಂಗಳದಲ್ಲಿ ಶನಿವಾರ ನಡೆದ ಭೀಮ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ನಿರಂತರವಾಗಿ ಅಪಮಾನಿಸಿ, ಅವರ ಪಾಂಡಿತ್ಯವನ್ನು ಗೌರವಿಸದೆ ರಾಜಕೀಯವಾಗಿ, ಸಾಮಾಜಿಕವಾಗಿ ಕಾಂಗ್ರೆಸ್ ತುಳಿಯಿತು. ಶೋಷಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಅಧಿಕಾರವನ್ನು ಅನುಭವಿಸಿಕೊಂಡು ಬಂದಿದೆ ಎಂದು ಆರೋಪಿಸಿದರು.
ಕುಟುಂಬ ರಾಜಕಾರಣಕ್ಕೆ ಮೀಸಲು ಮಾಡಿಕೊಂಡು ಪದೇ ಪದೆ ಸಂವಿಧಾನ ತಿದ್ದುಪಡಿಯನ್ನು ಮಾಡಿದ ಕಾಂಗ್ರೆಸಿಗರು ಇದೀಗ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ. ದೇಶಕ್ಕೆ ಸಂವಿಧಾನ ನೀಡಿದ ಚೇತನ ಅಂಬೇಡ್ಕರ್ ಅವರಿಗೆ ಕಾಂಗ್ರೆಸೇತರ ಸರ್ಕಾರ ಭಾರತ ರತ್ನ ನೀಡಿ ಗೌರವ ಸೂಚಿಸಿದೆ ಎಂದು ಹೇಳಿದರು.
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜನಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ದೇಶದ ಒಕ್ಕೂಟದ ವ್ಯವಸ್ಥೆಗೆ ಒತ್ತು ನೀಡಿದರು. ಅಂಬೇಡ್ಕರ್ ಅವರ ಚಿಂತನೆ ಮತ್ತು ಆದರ್ಶಗಳನ್ನು ಪಾಲಿಸುವ ಮೂಲಕ ಸಾಮಾಜಿಕ ನ್ಯಾಯದ ಅಡಿಯಲ್ಲಿ ಶೋಷಿತ ಸಮುದಾಯಗಳಿಗೆ ಹೆಚ್ಚಿನ ಗೌರವ ಸಿಗುವಂತೆ ಕೆಲಸ ಮಾಡಿದರು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಮಾತನಾಡಿ, ಅಂಬೇಡ್ಕರ್ ಹೆಸರಿನಲ್ಲಿ ವೋಟ್‌ಬ್ಯಾಂಕ್ ರಾಜಕಾರಣ ಮಾಡುವ ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಬೀರೂರು ಪುರಸಭಾಧ್ಯಕ್ಷೆ ವನಿತಾ ಮಧು, ಉಪಾಧ್ಯಕ್ಷೆ ಮಂಜುಳಾ ಚಂದ್ರು, ನಾಗರಾಜ್, ಸುಧಾ ಉಮೇಶ್, ಮಾಣಿಕ್ ಭಾಷಾ, ಶೂದ್ರ ಶ್ರೀನಿವಾಸ್, ಹುಲ್ಲೇಹಳ್ಳಿ ಲಕ್ಷ್ಮಣ್, ರಾಘವೇಂದ್ರ, ಬಸವರಾಜ್, ಜಿಪಂ ಮಾಜಿ ಉಪಾಧ್ಯಕ್ಷೆ ಮಾಲಿನಿಬಾಯಿ ರಾಜಾನಾಯ್ಕ, ಬಿದರೆ ಜಗದೀಶ್, ಎಸ್ಸಿ ಮೋರ್ಚಾ ಪದಾಧಿಕಾರಿಗಳು ಹಾಗೂ ಬಿಜೆಪಿ ಬೆಂಬಲಿತ ದಲಿತ ಸಂಘಟನೆ ಮುಖಂಡರು ಇದ್ದರು.