ಅಂಬಿ ಸ್ಪರ್ಧೆ ಗೊಂದಲ

ಮಂಡ್ಯ: ಹೈಕಮಾಂಡ್ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡ್ತೀನಿ, ಇಲ್ಲಾಂದ್ರೆ ಪಕ್ಷದ ಪರ ಕೆಲಸ ಮಾಡ್ತೀನಿ., ನಾನೇ ಆಗಬೇಕು, ನನ್ನ ಹೆಂಡತಿ, ಮಕ್ಕಳಿಗೆ ಟಿಕೆಟ್ ಬೇಕು ಅನ್ನಲ್ಲಾ… ಮಂಡ್ಯದಲ್ಲಿ ಸಿಗಬೇಕಲ್ಲ ನಮ್ಮಂತವರು…? ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ ಶಾಸಕ ಅಂಬರೀಶ್ ಸಿನಿಮಾ ಸ್ಟೈಲ್​ನಲ್ಲೇ ಆಡಿದ ಒಗಟಿನ ಮಾತುಗಳಿವು. ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ಎಲ್ಲ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಆರಂಭವಾಗಿದೆ. ನೀವು ಯಾವಾಗ ಆರಂಭಿಸುತ್ತೀರಿ ಎಂಬ ಪ್ರಶ್ನೆಗೆ ನನಗಿನ್ನೂ ಟಿಕೆಟ್ ಫೈನಲ್ ಆಗಿಲ್ಲ. ಯಾರ್ಯಾರಿಗೆ ಆಗಿದೆ ಗೊತ್ತಿಲ್ಲ. ಆಗಿರುವವರು ಪ್ರಚಾರ ಮಾಡುತ್ತಿರಬಹುದು ಎಂದು ಉತ್ತರಿಸಿದರು.

ನಿಮಗೆ ಟಿಕೆಟ್ ಸಿಗುತ್ತ ಎಂಬ ಪ್ರಶ್ನೆಗೆ, ಕೊಟ್ಟರೆ ಸಂತೋಷ, ಕೊಡದಿದ್ದರೂ ಸಂತೋಷ. ಕೊಡಲಿಲ್ಲ ಅಂಥ ಬೇಜಾರು ಮಾಡ್ಕೊಳ್ಳೋಕೆ ಆಗುತ್ತಾ? ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷದ ಅಭ್ಯರ್ಥಿ ಗೆಲುವಿಗೆ ದುಡಿಯುವೆ. ನನಗೆ ಟಿಕೆಟ್ ಕೊಡಬೇಕೋ, ಬೇಡವೋ ಎಂಬುದನ್ನು ಹೈಕಮಾಂಡ್ ತೀರ್ವನಿಸುತ್ತದೆ ಎಂದರು. ಕಾಂಗ್ರೆಸ್​ನ ಸಂಸ್ಕೃತಿಯಲ್ಲಿ ಹೈಕಮಾಂಡ್ ಟಿಕೆಟ್ ನೀಡಿದರೇ ಸಿದ್ದರಾಮಯ್ಯ, ಪರಮೇಶ್ವರ್ ಸ್ಪರ್ಧೆ. ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ನನಗೆ ಹೈಕಮಾಂಡ್ ಹೇಳಿದರೆ ಬಿಟ್ಟುಕೊಡಲು ಸಿದ್ದ. ನಾನೇ ಆಗಬೇಕು. ನನ್ನ ಮಕ್ಕಳು ಆಗಬೇಕು. ನಮ್ಮ ಅಪ್ಪನೇ ಆಗಬೇಕೆಂಬ ಆಸೆ ನನಗಿಲ್ಲ. ಕಾಂಗ್ರೆಸ್​ನಲ್ಲಿ ಸೋನಿಯಾ, ರಾಹುಲ್, ಜೆಡಿಎಸ್​ನಲ್ಲಿ ದೇವೇಗೌಡ, ಕುಮಾರಸ್ವಾಮಿ ಬಿಟ್ಟರೆ ಇನ್ಯಾರಿಗೂ ಕುಟುಂಬ ರಾಜಕಾರಣ ಒಗ್ಗುವುದಿಲ್ಲ ಎಂದು ಹೇಳಿದರು. ಏತನ್ಮಧ್ಯೆ ಕಾಂಗ್ರೆಸ್ ಟಿಕೆಟ್​ಗೆ ಅಂಬರೀಷ್ ಅರ್ಜಿ ಕೂಡ ಸಲ್ಲಿಸಿಲ್ಲ. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *