ಕೊಪ್ಪಳ: ಕೋಲಿ, ಕಬ್ಬಲಿಗ, ಅಂಬಿಗ ಇನ್ನಿತರ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಕೊಪ್ಪಳ ತಾಲೂಕು ಗಂಗಾಮತಸ್ಥರ ಸಂಘದ ನೇತೃತ್ವದಲ್ಲಿ ಸಮುದಾಯದ ಜನರು ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರಿಸಲು ಬೇಕಾದ ಅಗತ್ಯ ದಾಖಲೆಗಳನ್ನು ಸಲ್ಲಿಸಿದೆ. ಕುಲ ಶಾಸ್ತ್ರೀಯ ಅಧ್ಯಯನ ವರದಿಯೂ ಬಂದಿದೆ. ಹಿಂದುಳಿದ ವರ್ಗಗಳಲ್ಲಿ ನಾವು ತೀರಾ ಹಿಂದುಳಿದಿದ್ದೇವೆ. ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಹಿಂದುಳಿದಿದ್ದೇವೆ. 2019ರ ಲೋಕ ಸಭಾ ಚುನಾವಣೆ ಪ್ರಚಾರಕ್ಕೆ ಕಲಬುರ್ಗಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಕೋಲಿ, ಕಬ್ಬಲಿಗ, ಅಂಬಿಗ ಪರ್ಯಾಯ ಪದಗಳನ್ನು ಪಪಂಗೆ ಸೇರಿಸುವ ಭರವಸೆ ನೀಡಿದ್ದರು. ಅದನ್ನು ನಂಬಿ ನಮ್ಮ ಸಮುದಾಯ ಬಿಜೆಪಿ ಬೆಂಬಲಿಸಿದೆ. ಚುನಾವಣೆ ಮುಗಿದು ನಾಲ್ಕು ವರ್ಷವಾದರೂ ಬೇಡಿಕೆ ಈಡೇರಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಮುದಾಯಕ್ಕೆ ಈವರೆಗೆ ಆದ ಅನ್ಯಾಯ ಮುಂದುವರೆಯಬಾರದು. ಬರುವ ಲೋಕಸಭೆ ಚುನಾವಣೆ ವೇಳೆಗೆ ಬೇಡಿಕೆ ಈಡೇರಿಸಬೇಕು. ರಾಜ್ಯದ 17 ಲೋಕಸಭೆ ಹಾಗೂ 170ವಿಧಾನಸಭೆ ಕ್ಷೇತ್ರಗಳಲ್ಲಿ ನಮ್ಮ ಸಮುದಾಯ ನಿರ್ಣಾಯಕ ಮತಗಳನ್ನು ಹೊಂದಿದೆ. ಈಗಾಗಲೇ ಕೇಂದ್ರ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಕೋಳಿದೋರ್, ಠೋಕ್ರೆ ಕೋಳಿ, ಕೋಯಾ, ಕೊಲ್ಜಾ, ಕೊಲ್ಗಾ ಪದಗಳಿವೆ. ಅವುಗಳಿಗೆ ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಅಂಬಿಗರ ಪ್ರಮಾಣ ಪತ್ರ ನೀಡುತ್ತಿಲ್ಲ. ಸುಪ್ರೀಂ ಕೋರ್ಟ್ ಅಭಿಪ್ರಾಯದಂತೆ ಯಾವುದೇ ಜನಾಂಗಕ್ಕೆ ಮೀಸಲಾತಿ ನೀಡಿದರೆ, ಅದರ ಪರ್ಯಾಯ ಪದಗಳಿಗೆ ಅನ್ವಯ ಆಗಲಿದೆ ಎಂಬ ನಿಯಮವಿದ್ದರೂ ಪಾಲಿಸುತ್ತಿಲ್ಲ. ತಕ್ಷಣ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ಬಳಿಕ ಎಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಕಂಪಸಾಗರ, ಪದಾಧಿಕಾರಿಗಳಾದ ಶಿವಾಜಿ ಮೇಟೆಗಾರ, ರಾಮಣ್ಣ ಕೌದಿ, ವಸಂತಕುಮಾರ್, ಲೋಕೇಶ ಬಾರಕೇರ, ಬುಡ್ಡಪ್ಪ ಬಾರಕೇರ, ಹರೀಶ್ ಪೂಜಾರ, ಲಿಂಗರಾಜ, ಉಮೇಶ ದಳವಾಯಿ ಇತರರಿದ್ದರು.