ಅಂಧದಂಪತಿಯ ಮಗು ಅಪಹರಣ ಪ್ರಕರಣ: ಕಿಡ್ನ್ಯಾಪ್ ಮಾಡಿಸಿದ ಹಂಬಲ

ಬೆಂಗಳೂರು: ಮೆಜೆಸ್ಟಿಕ್​ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಅಂಧ ದಂಪತಿಯ 8 ತಿಂಗಳ ಮಗು ಅಪಹರಣ ಪ್ರಕರಣ ಹೊಸ ತಿರುವು ಪಡೆದಿದೆ. ಮಗು ರಕ್ಷಣೆ ಮಾಡಿದ ಮಹಿಳೆಯೇ ಆರೋಪಿ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದ್ದು, ಪಾರ್ವತಮ್ಮ ಎಂಬಾಕೆಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿಯ ಪಾರ್ವತಮ್ಮಗೆ ಪತಿ ಮತ್ತು ಮಕ್ಕಳು ಇರಲಿಲ್ಲ. ಇದರಿಂದಾಗಿ ಖಿನ್ನತೆಗೆ ಒಳಗಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪಾರ್ವತಮ್ಮಗೆ ಮಗು ಸಾಕಬೇಕೆಂಬ ಹಂಬಲ ವಿತ್ತು. ಈ ನಡುವೆ ಕೆಲಸ ನಿಮಿತ್ತ ಚಿತ್ರದುರ್ಗಕ್ಕೆ ಹೋಗಿದ್ದ ಪಾರ್ವತಮ್ಮ, ಏ.27ರಂದು ಮೆಜೆಸ್ಟಿಕ್​ಗೆ ಬಂದಿದ್ದರು. ಇದೇ ವೇಳೆ ಅಂಧ ದಂಪತಿ ರಾಯಚೂರಿನಿಂದ ಬೆಳಗ್ಗೆ 7 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣ ತಲುಪಿದ್ದರು.

ಬಿಎಂಟಿಸಿ ಬಸ್ ನಿಲ್ದಾಣ ಪ್ಲಾ್ಯಟ್​ಫಾರಂ ನಂ.19 (ಡಿ)ಯಲ್ಲಿ ಪುತ್ರ ಸಾಗರ್ ಜತೆ ಅಂಧ ದಂಪತಿ ಕುಳಿತಿದ್ದರು. ಆಗ ಜೋರಾಗಿ ಅಳುತ್ತಿದ್ದ ಮಗುವಿಗೆ ನೀರು ಕುಡಿಸಲು ತಾಯಿ ಮುಂದಾದಾಗ ಅಲ್ಲೇ ಇದ್ದ ಪಾರ್ವತಮ್ಮ, ತಾನೇ ನೀರು ಕೊಡಿಸುತ್ತೇನೆ ಎಂದು ಹೇಳಿ ಅವರ ಕೈಯಿಂದ ಮಗುವನ್ನು ಪಡೆದು ಪರಾರಿಯಾಗಿದ್ದಳು.

ಮಗು ಕಳೆದುಕೊಂಡ ಅಂಧದಂಪತಿ ಉಪ್ಪಾರಪೇಟೆ ಪೊಲೀಸರ ಮೊರೆ ಹೋಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ನಡೆಸಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಿಸಿದ್ದರು. ಭಯಗೊಂಡ ಪಾರ್ವತಮ್ಮ ನ ತಾಯಿ ಮತ್ತು ಸಹೋದರಿ ಮಗುವನ್ನು ಏ.30ರಂದು ಉಪ್ಪಾರಪೇಟೆ ಠಾಣೆಗೆ ಒಪ್ಪಿಸಿದ್ದರು.

ಚಿತ್ರದುರ್ಗದಿಂದ ಬಂದ ಪಾರ್ವತಮ್ಮ ಮೆಜೆಸ್ಟಿಕ್​ನಲ್ಲಿ ಬಸ್​ಗಾಗಿ ಕಾಯುತ್ತಿದ್ದಾಗ ಮಹಿಳೆಯೊಬ್ಬರು ಶೌಚಗೃಹಕ್ಕೆ ಹೋಗಿ ಬರುವುದಾಗಿ ಹೇಳಿ ಬಂದು ಮಗುವನ್ನು ಕೊಟ್ಟು ಹೋಗಿದ್ದರು. ಎಷ್ಟು ಹೊತ್ತಾದರೂ ವಾಪಸ್ ಬಂದಿಲ್ಲ. ಕೊನೆಗೆ ಪಾರ್ವತಮ್ಮ, ಶೌಚಗೃಹಕ್ಕೆ ಹೋಗಿ ನೋಡಿದಾಗ ಆಕೆ ಇರಲಿಲ್ಲ. ದಿಕ್ಕು ತೋಚದೆ ಮಗುವನ್ನು ಮನೆಗೆ ಕರೆತಂದು ಆರೈಕೆ ಮಾಡಿದ್ದರು. ಟಿವಿ ಮತ್ತು ಪತ್ರಿಕೆಗಳಲ್ಲಿ ಮಗು ಅಪಹರಣದ ಸುದ್ದಿ ತಿಳಿದು ಠಾಣೆಗೆ ಬಂದಿರುವುದಾಗಿ ಪಾರ್ವತಮ್ಮಳ ತಾಯಿ ಮತ್ತು ಸಹೋದರಿ ಹೇಳಿಕೆ ನೀಡಿದ್ದರು.

ಶಿಶು ಸಾಕುವ ಉದ್ದೇಶ

ಮಕ್ಕಳನ್ನು ಸಾಕಬೇಕೆಂದು ಪಾರ್ವತಮ್ಮಗೆ ಹಂಬಲವಿತ್ತು. ಅಂಧ ದಂಪತಿಯ ಕೈಯಲ್ಲಿದ್ದ ಗಂಡು ಮಗು ಕಂಡು ಆಸೆ ಹುಟ್ಟಿತ್ತು. ಅಂಧ ದಂಪತಿ ಮಗುವನ್ನು ಭಿಕ್ಷೆ ಬೇಡಲು ಬಳಸುತ್ತಾರೆ. ಇಷ್ಟು ಚೆನ್ನಾಗಿರುವ ಮಗುವನ್ನು ಅಪಹರಿಸಿದರೆ ಯಾರೂ ಕೇಳುವುದಿಲ್ಲ. ತಾನೇ ಸಾಕಬಹುದು ಎಂದೆಣೆಸಿ ಮಗುವನ್ನು ಅಪಹರಿಸಿ ಮನೆಗೆ ತಂದು ತಾಯಿ ಮತ್ತು ಸಹೋದರಿಗೆ ವಿಷಯ ತಿಳಿಸಿದ್ದರು. ಎರಡು ದಿನ ಚೆನ್ನಾಗಿ ಆರೈಕೆ ಮಾಡಿದ್ದರು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಕಾರಣ ಪಾರ್ವತಮ್ಮಗೆ ಬುದ್ಧಿವಾದ ಹೇಳಿ ತಾಯಿ ಮತ್ತು ಸಹೋದರಿ ಮಗುವನ್ನು ತಂದು ಉಪ್ಪಾರಪೇಟೆ ಠಾಣೆಗೆ ಒಪ್ಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಠಾಣೆಗೆ ಒಪ್ಪಿಸದೇ ಅಪರಾಧ

ಮಗುವನ್ನು ಸಾಕುವ ಉದ್ದೇಶದಿಂದಲೇ ಅಪಹರಣ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಶೌಚಗೃಹಕ್ಕೆ ಹೋಗಿ ಬರುವುದಾಗಿ ಹೇಳಿ ಅಪರಿಚಿತ ಮಹಿಳೆ ಮಗು ಕೊಟ್ಟು ಹೋದವಳು ವಾಪಸ್ ಬಂದಿಲ್ಲ ಎಂದು ಪಾರ್ವತಮ್ಮಮತ್ತು ಆಕೆಯ ತಾಯಿ, ಸಹೋದರಿ ಹೇಳುತ್ತಾರೆ. ಆದರೆ, ಮಗು ಸಿಕ್ಕ ಕೂಡಲೇ ಪೊಲೀಸ್ ಠಾಣೆಗೆ ಒಪ್ಪಿಸದೆ ಮನೆಗೆ ಕರೆದೊಯ್ದು 2 ದಿನ ಇಟ್ಟುಕೊಂಡಿರುವುದು ಅಪರಾಧವಾಗಿದೆ. ಅದಕ್ಕಾಗಿ ಪಾರ್ವತಮ್ಮನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನ್ಯಾಯಾಲಯ ಜಾಮೀನಿನ ಮೇಲೆ ಪಾರ್ವತಮ್ಮನನ್ನು ಬಿಡುಗಡೆ ಮಾಡಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *