ಅಂದು ಹಚ್ಚಿದ ಜ್ಞಾನದ ಬೆಳಕಿನಿಂದ ಭಾರತದ ಭಾಗ್ಯೋದಯಕ್ಕೆ ನಾಂದಿ

ಎಂಥ ಆಶ್ಚರ್ಯ ನೋಡಿ!

ಮಹಾಪುರುಷರ, ಸಂತ-ಮಹಂತರ ಶತಮಾನೋತ್ಸವ ಆಚರಿಸಿ, ಪ್ರೇರಣೆ ಪಡೆಯುವುದು ನಮ್ಮಲ್ಲಿ ವಾಡಿಕೆ. ಭಾಷಣವೊಂದು ಶತಮಾನೋತ್ಸವ ಆಚರಿಸಿ ಕೊಳ್ಳುತ್ತದೆ, ಆ ಬಳಿಕವೂ ತನ್ನ ಸ್ಪೂರ್ತಿಯ ಶಕ್ತಿಯನ್ನು ಹೆಚ್ಚಿಸಿಕೊಂಡು ಜಾಡ್ಯ ನಿವಾರಿಸುತ್ತದೆ, ಆತ್ಮಶಕ್ತಿ ಜಾಗೃತಗೊಳಿಸುತ್ತದೆ, ನಮ್ಮನ್ನು ನಮ್ಮೊಳಗೆ ಇಣುಕಲು ಪ್ರೇರೇಪಿಸುತ್ತದೆ ಎಂದರೆ ಎಂಥ ಅದ್ಭುತವಲ್ಲವೇ? ನೂರಲ್ಲ, ಆ ಭಾಷಣಕ್ಕೆ 125 ವರ್ಷಗಳು ಪೂರ್ಣಗೊಂಡಿವೆ. ಮನುಕುಲದ ಚೈತನ್ಯಕ್ಕೆ, ವೈಯಕ್ತಿಕ ಆತ್ಮೋತ್ಕರ್ಷಕ್ಕೆ, ಸೇವೆ, ತ್ಯಾಗದ ದೊಡ್ಡ ಪರಂಪರೆಗೆ ಇಂದಿಗೂ ಆ ಮಾತುಗಳೇ ಜೀವಾಳ, ಆ ಸಂದೇಶ ಗಳೇ ದಿಕ್ಸೂಚಿ. ಇದು ಸ್ವಾಮಿ ವಿವೇಕಾನಂದರ ಶಕ್ತಿ! ವಿವೇಕಾನಂದರ ಶಕ್ತಿ ಎಷ್ಟು ಅಸಾಧಾರಣ ಎಂಬುದು ಭಾರತ ಅರಿತಿದ್ದು ಅವರು ಅಮೆರಿಕಕ್ಕೆ ಹೋದ ಮೇಲೆಯೇ!

ಜಗತ್ತಿನಲ್ಲಿ ಮಹಾ ಪರಿವರ್ತನೆ ತರಬಲ್ಲಂಥ ಘಟನೆಗಳಿಗೆ ಆ ಭಗವಂತನೇ ಹೇಗೆಲ್ಲ ವೇದಿಕೆ ರೂಪಿಸಿ, ವಿವೇಕಾನಂದರಂಥ ಧೀಮಂತರಲ್ಲಿ ದನಿಯಾಗಿ ಬಿಡುತ್ತಾನೆ ಎಂಬುದೇ ವಿಸ್ಮಯ ಮೂಡಿಸುವಂಥದ್ದು. ಏಕೆಂದರೆ, ನಾವೆಲ್ಲ ನಮ್ಮ ಕನಸಿಗೆ ಒಂದೋ, ಎರಡೋ ಅಡ್ಡಿಗಳು ಬಂದುಬಿಟ್ಟರೆ ಕನಸನ್ನೇ ಮರೆತು ಕೂತು ಬಿಡುತ್ತವೆ. ವಿವೇಕಾನಂದರು ಹಾಗಲ್ಲ, ನೂರೆಂಟು ತಾಪತ್ರಯಗಳನ್ನು ಮೀರಿ ನಿಂತು ಜಗತ್ತಿಗೆ ಭಾರತದ ಶಕ್ತಿಯನ್ನು, ಸನಾತನ ಧರ್ಮದ ವೈಭವವನ್ನು ಹೇಳಿ ಅಧ್ಯಾತ್ಮ ಎಂದರೆ ಕಷ್ಟದಲ್ಲಿ ಇರುವವರ ಕಣ್ಣೀರು ಒರೆಸಿ, ಸೇವೆಯಲ್ಲಿ ತೊಡಗುವುದು ಎಂದು ಹೇಳಿದರಲ್ಲ! ಅದಕ್ಕೆಂದೆ ಶ್ರೇಷ್ಠ ಮಾನವೀಯ ಕಾರ್ಯಗಳಲ್ಲಿ ತೊಡಗಿರುವ ಹಲವು ಸಂಘಸಂಸ್ಥೆಗಳು ಇಂದಿಗೂ ವಿವೇಕಾನಂದರ ಹೆಸರಲ್ಲೇ ಮುನ್ನಡೆಯುತ್ತ ಸೇವೆಯ ಆದರ್ಶವನ್ನು ಸ್ಥಾಪಿಸುತ್ತಿವೆ.

ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಹೋಗಬೇಕೆಂದರೆ ವಿವೇಕಾನಂದರ ಬಳಿ ದುಡ್ಡೇ ಇರಲಿಲ್ಲ. ದುಡ್ಡು ಹೊಂದಿಸಿಕೊಂಡು ಅಮೆರಿಕ ತಲುಪಿದಾಗ ಸಮ್ಮೇಳನ ನಡೆಯಲು ಒಂದೂವರೆ ತಿಂಗಳಿತ್ತು. ‘ನಮ್ಮವರು’ ಯಾರೂ ಇಲ್ಲದ ದೇಶದಲ್ಲಿ ಅಷ್ಟು ದಿನಗಳ ಕಾಲ ಎಲ್ಲಿರುವುದು? ಅವರ ಬಳಿ ಕೆಲವೇ ದಿನಗಳಿಗಾಗುವಷ್ಟು ದುಡ್ಡಿತ್ತು. ಯಾರೋ ಆಸರೆ ನೀಡಿದರು. ಆದರೆ, ‘ಚಿಕಾಗೋದ ವಿಶ್ವ ಧರ್ಮ ಸಮ್ಮೇಳನದಲ್ಲಿ ನೀವು ಮಾತನಾಡಲು ಸಾಧ್ಯವಿಲ್ಲ, ಸ್ಪೀಕರ್​ಗಳ ಸೂಚಿಯಲ್ಲಿ ನಿಮ್ಮ ಹೆಸರೇ ಇಲ್ಲ’ ಅಂದಾಗ ಭಾರತದಿಂದ ಇಲ್ಲಿವರೆಗೂ ಬಂದದ್ದು ವ್ಯರ್ಥವಾಗಿ ಬಿಡುತ್ತ ಅಂತ ಒಂದು ಕ್ಷಣ ಅನಿಸಿಬಿಟ್ಟಿತ್ತು ಸ್ವಾಮೀಜಿಗೆ. ‘ಸಮ್ಮೇಳನದಲ್ಲಿ ಮಾತನಾಡಲು ಏನು ಮಾಡಬೇಕು’ ಅಂತ ಕೇಳಿದಾಗ ‘ಅದಕ್ಕೆ ಪರಿಚಯ ಪತ್ರ (ಅರ್ಹತಾ ಪತ್ರ) ಬೇಕು’ ಎಂದಿದ್ದರು ಸಂಘಟಕರು. ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಸ್ವಾಮೀಜಿಯ ಜ್ಞಾನ, ಪ್ರೇಮಮಯ ಹೃದಯ ಕಂಡು ‘ನಿಮಗಲ್ಲದೆ ಇನ್ಯಾರಿಗೆ ಅರ್ಹತಾ ಪತ್ರ ನೀಡಲು ಸಾಧ್ಯ?’ ಎಂದವರೇ ಪರಿಚಯ ಪತ್ರವನ್ನು ಬರೆದು ಕೊಟ್ಟರು.

1893ರ ಸೆಪ್ಟೆಂಬರ್ 11ರಂದು ಸಮ್ಮೇಳನ ಆರಂಭವಾದಾಗ ಕಿಕ್ಕಿರಿದು ತುಂಬಿದ ಸಭೆಯಲ್ಲಿ ಏಳು ಸಾವಿರಕ್ಕೂ ಅಧಿಕ ಜನ ಪ್ರೇಕ್ಷಕರು. ಮೊದಲನೇ ಅವಧಿ ಮುಗಿಯಿತು ಸ್ವಾಮೀಜಿ ಮಾತನಾಡಲಿಲ್ಲ. ಎರಡನೇ ಅವಧಿಯೂ ಮುಗಿಯಿತು. ‘ಇವರ್ಯಾರು ಮಾತಾಡುತ್ತಾರೋ ಇಲ್ಲವೋ’ ಎಂಬ ಗುಸುಗುಸು ಆರಂಭವಾದಾಗ ಮೂರನೇ ಅವಧಿಯ ಕೊನೆಯ ಭಾಷಣಕಾರರಾಗಿ ಎದ್ದು ನಿಂತ ಸ್ವಾಮಿ ವಿವೇಕಾನಂದರು ಐದೇ ಐದು, ಹೌದು ಬರೀ ಐದೇ ಶಬ್ದಗಳಲ್ಲಿ ಜಗತ್ತಿನ ಅಸಂಖ್ಯ ಮನಸ್ಸುಗಳನ್ನು ಗೆದ್ದುಬಿಟ್ಟರು. ‘ಠಜಿಠಠಿಛ್ಟಿಠ ಚ್ಞಛ ಚ್ಟಿಟಠಿಜಛ್ಟಿಠ ಟ್ಛ ಅಞಛ್ಟಿಜ್ಚಿಚ’ ಎಂದು ಉದ್ಗರಿಸುತ್ತಿದ್ದಂತೆ ಕಿವಿಗಡಚಿಕ್ಕುವಂತೆ ಕರತಾಡನ! ಅಲ್ಲಿ ನೆರೆದಿದ್ದ ಹೆಣ್ಣುಮಕ್ಕಳ ಕಣ್ಣಲ್ಲಿ ಆನಂದಾಶ್ರು!! ಅವರನ್ನು ಹತ್ತಿರದಿಂದ ನೋಡಬೇಕೆಂದು ಬೆಂಚುಗಳನ್ನು ಹಾರಿಕೊಂಡು ಬಂದರು! ಸಾವಿರ-ಸಾವಿರ ಮನಸ್ಸುಗಳು ಒಂದೇ ಕ್ಷಣದಲ್ಲಿ ಸ್ವಚ್ಛವಾಗಿ ಬಿಟ್ಟಿದ್ದವು. ಅಮೆರಿಕದ ಜನರಿಗೆ ‘ಸೋದರ-ಸೋದರಿಯರು’ ಎಂಬ ಶಬ್ದ ಗೊತ್ತಿರಲಿಲ್ಲ ಎಂದೇನಲ್ಲ. ಸ್ವಾಮೀಜಿ ಅದನ್ನು ಹೇಳುವಾಗ ಇದ್ದ ಭಾವುಕತೆ, ಹೃದಯಾಂತರಾಳದಿಂದ ಹೊಮ್ಮುತ್ತಿದ್ದ ಮಾನವೀಯ ಪ್ರೇಮ, ಕಣ್ಣಲ್ಲಿ ಇದ್ದ ಕಾಂತಿ, ಮುಖದಲ್ಲಿನ ಗಂಭೀರಭಾವದ ಜತೆಗೆ ಮಂದಹಾಸ… ಈ ಎಲ್ಲ ಗುಣಗಳಿಂದಲೇ ಅಲ್ಲಿಯವರು ಸ್ವಾಮೀಜಿಯಲ್ಲಿ ದೇವರನ್ನು ಕಾಣಲು ಸಾಧ್ಯವಾಯಿತು.

ಬರೀ ಮೂರೂವರೆ ನಿಮಿಷಗಳ (ವಿಶ್ವಧರ್ಮ ಸಮ್ಮೇಳನ ದಲ್ಲಿ ಮಾಡಿದ ಮೊದಲ ಭಾಷಣ. ಅವರು ಅಲ್ಲಿ ಮಾಡಿದ ಒಟ್ಟು ಭಾಷಣ ಆರು) ಭಾಷಣದಲ್ಲಿ ಅವರು ಭಾರತದ ಅಂತಃಸತ್ವವನ್ನು ಪರಿಚಯಿಸಿ ಕೊಟ್ಟ ಬಗೆ, ಸನಾತನ ಧರ್ಮದ ತಿರುಳನ್ನು, ಮಾನವೀಯ ಮೌಲ್ಯದ ಮಹಿಮೆಯನ್ನು ವಿವರಿಸಿದ ಪರಿಯೇ ಭಾರತದ ಭಾಗ್ಯೋದಯಕ್ಕೆ ನಾಂದಿ ಹಾಡಿತು. ಜಗತ್ತು ನಮ್ಮನ್ನು ನೋಡುವ ದೃಷ್ಟಿಯೇ ಬದಲಾಯಿತು. ‘ಸ್ವಾಮೀಜಿಯ ಆ ಮೂರೂವರೆ ಭಾಷಣದ ಪರಿಣಾಮ ಏನು ಗೊತ್ತೆ?’ ಎಂದು ರಾಮಕೃಷ್ಣ ಆಶ್ರಮದ ಸ್ವಾಮೀಜಿಯೊಬ್ಬರು ವಿವರಿಸುವಾಗ ‘ವಿವೇಕಾನಂದರು ಮೂರೂವರೆ ವರ್ಷಗಳ ಕಾಲ ಅಮೆರಿಕದಾದ್ಯಂತ ಸಂಚರಿಸಬೇಕಾಯಿತು’! ಎಷ್ಟೊಂದು ಕಡೆ ಭಾಷಣಗಳು, ಹೋದಲೆಲ್ಲ ಜನಜಂಗುಳಿ. ‘ನಮ್ಮಲ್ಲಿ ಬನ್ನಿ’ ಎಂಬ ಆಹ್ವಾನ. ಅಮೆರಿಕದ ಖ್ಯಾತನಾಮ ಪತ್ರಿಕೆಗಳು ಸ್ವಾಮೀಜಿಯವರ ಸಂದರ್ಶನ ಮಾಡಿ ವಿವರವಾಗಿ ಪ್ರಕಟಿಸಿದವು. ಪ್ರತಿಷ್ಠಿತರೆಲ್ಲ ಸ್ವಾಮೀಜಿಯನ್ನು ಮಾತನಾಡಿಸಲು ತುದಿಗಾಲಿನಲ್ಲಿ ನಿಂತರು. ಇವೆಲ್ಲವೂ ಸ್ವಾಮೀಜಿಗೆ ಖುಷಿ ತಂದವು ಅಂದುಕೊಂಡಿರೇನು, ಬದಲಿಗೆ ಅವರು ನೊಂದುಕೊಂಡರು. ಏಕೆಂದರೆ, ವಿವೇಕಾನಂದರು ಅಮೆರಿಕಕ್ಕೆ ಬಂದದ್ದು ಖ್ಯಾತಿ ಗಳಿಸಲು ಅಲ್ಲ, ಸುತ್ತಾಟಕ್ಕಾಗಿಯೂ ಅಲ್ಲ. ಅವರು ಬಂದದ್ದು, ಯುರೋಪಿಯನ್ನರು ಭಾರತ ಮತ್ತು ಭಾರತೀಯರ ಬಗ್ಗೆ ಮಾಡುತ್ತಿದ್ದ ಅಪಪ್ರಚಾರಕ್ಕೆ ತಕ್ಕ ಪ್ರತ್ಯುತ್ತರ ನೀಡಲು, ‘ಭಾರತೀಯರು ಅಜ್ಞಾನಿಗಳಲ್ಲ. ಅವರು ಇಡೀ ಜಗತ್ತಿಗೆ ಜ್ಞಾನದ ಪ್ರಭೆ ಹರಡುವ ಅಮೃತಪುತ್ರರು’ ಎಂದು ಸಾರಲು. ಇಲ್ಲಿಂದ ಬಂದ ಹಣದಲ್ಲಿ ಭಾರತದ ಬಡವರಿಗೆ ಸಹಾಯ ಮಾಡಬೇಕು ಎಂಬುದೂ ಅವರ ಉದ್ದೇಶವಾಗಿತ್ತು.

ಯಾವ ಭಾರತವನ್ನು ಅಮೆರಿಕನ್ನರು ಬಡ, ಕೃಪಣ, ಮೂಢನಂಬಿಕೆಗಳ ದೇಶ ಎಂದು ಕರೆಯುತ್ತಿದ್ದರೋ ಅದೇ ಅಮೆರಿಕನ್ನರು ಸ್ವಾಮೀಜಿ ಉಪನ್ಯಾಸಗಳ ಬಳಿಕ ಭಾರತದಿಂದ ಕಲಿಯುವುದು ತುಂಬ ಇದೆ, ಅಲ್ಲಿನ ಸತ್ವಸಾಮರ್ಥ್ಯಗಳು ನಮ್ಮನ್ನೂ ಗಟ್ಟಿಗೊಳಿಸಬಲ್ಲವು ಎಂಬುದನ್ನು ನಂಬಿದರು. ಸ್ವಾಮೀಜಿ ಈ ಸಂದರ್ಭದಲ್ಲಿ ಅಸಂಖ್ಯ ಅನುಯಾಯಿಗಳನ್ನು ಹೊಂದಿದರು. ಪ್ರಖರ ಪಂಡಿತರೆಲ್ಲ ಇವರಿಗೆ ತಲೆಬಾಗಿ ‘ನಿಮ್ಮ ಪ್ರತೀ ಮಾತೂ ಹೊಸ ಶಕ್ತಿಯನ್ನು ಕೊಡುತ್ತದೆ’ ಎಂದರು. ಧರ್ಮಗಳ ಹೆಸರಲ್ಲಿ ಸಿಕ್ಕಸಿಕ್ಕವರು ಏನೇನೋ ಹೇಳಿ ಮನಸ್ಸುಗಳನ್ನು ವಿಭಜಿಸಿ, ಮನುಜಪಥವನ್ನೇ ದಿಕ್ಕುತಪ್ಪಿಸುತ್ತಿದ್ದರಲ್ಲ ಅಂಥ ಸಂದರ್ಭದಲ್ಲಿ ಸ್ವಾಮೀಜಿ, ವಿಶ್ವಧರ್ಮದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಮೂಡಿಸಿ, ‘ನಾವೆಲ್ಲ ಒಂದೇ’ ಎಂಬ ಸಾಮರಸ್ಯದ ಭಾವವನ್ನು ನಿರ್ವಿುಸಿದರು. ‘ವಿಶ್ವಧರ್ಮ ಎಂದರೆ ಅದು ದೇಶ, ಕಾಲಗಳ ಮಿತಿ ಮೀರಿರಬೇಕು. ಆ ಧರ್ಮ ಭಾಸ್ಕರನ ಬೆಳಕು ಕೃಷ್ಣನ ಅನುಯಾಯಿಗಳ ಮೇಲೆ, ಕ್ರಿಸ್ತನ ಅನುಯಾಯಿಗಳ ಮೇಲೆ, ಪಾಪಿಗಳ ಮೇಲೆ, ಪುಣ್ಯವಂತರ ಮೇಲೆ ಸಮವಾಗಿ ಬೀಳಬೇಕು. ಸುಧಾರಣೆ ಅಥವಾ ಅಭಿವೃದ್ಧಿಗೆ ಅಪಾರ ಅವಕಾಶ ಹೊಂದಿರಬೇಕು. ಸರ್ವರಿಗೂ ಆಶ್ರಯವನ್ನೀಯುವಂಥಾದ್ದಾಗಿರಬೇಕು’ ಎಂಬ ಸ್ವಾಮೀಜಿ ಮಾತು ಎಷ್ಟು ಅರ್ಥಪೂರ್ಣ! ಹಿಂದೂಧರ್ಮದ ಬಗ್ಗೆ ಮಾತನಾಡುವಾಗಲಂತೂ ಖಡಕ್ಕಾಗಿ ಸಿಡಿಸಿದ ನುಡಿಗಳು ಹಲವು ದೇಶಗಳು ಎದ್ದು ಕೂಡುವಂತೆ ಮಾಡಿದವು. ‘ಕ್ರೖೆಸ್ತರಾಷ್ಟ್ರಗಳ ಸಂಪತ್ತು ಅಸಂಖ್ಯ ಏಷ್ಯನ್ನರ ಕುತ್ತಿಗೆ ಕತ್ತರಿಸಿ ಪಡೆದಿರುವಂಥದ್ದು; ಕ್ರೖೆಸ್ತ ಧರ್ಮವು ಸಹಮಾನವರ ಕತ್ತು ಕತ್ತರಿಸುವುದರ ಮೂಲಕ ಸೌಭಾಗ್ಯ ಪಡೆಯುತ್ತಿದೆ. ಆದರೆ ಹಿಂದೂವಾದವನು ಎಂದಿಗೂ ಹಾಗೆ ಸಂಪತ್ತು ಗಳಿಸಲಾರ’ ಎಂದುಬಿಟ್ಟರು. ಪಾಶ್ಚಾತ್ಯ ರಾಷ್ಟ್ರಗಳ ಕೊರತೆಗಳನ್ನು ಎತ್ತಿ ತೋರಿಸಿದ ಸ್ವಾಮೀಜಿ ಭಾರತೀಯರ ಕೊರತೆಗಳತ್ತ ಬೊಟ್ಟು ಮಾಡುವುದನ್ನು ಮರೆಯಲಿಲ್ಲ. ತಮ್ಮ ಎರಡನೇ ಭಾಷಣದಲ್ಲೇ ಅವರು ಬಾವಿಕಪ್ಪೆಗಳ ದೃಷ್ಟಾಂತ ಉದಾಹರಿಸಿದ್ದರು.

ಮನುಕುಲದ ಸೇವೆ ಮಾಡಲಾಗದ, ನೊಂದವರ ಕಣ್ಣೀರು ಒರೆಸಲಾಗದ ಅಧ್ಯಾತ್ಮಕ್ಕೆ ಅರ್ಥ ಇಲ್ಲ ಎಂದ ಅವರು ‘ನಾನೊಬ್ಬ ತ್ಯಾಗೀ ಸಂನ್ಯಾಸಿ. ಆದರೆ ಒಬ್ಬ ವಿಧವೆಯ ಕಣ್ಣೀರನ್ನು ಒರೆಸಲಾಗದ ಅಥವಾ ಅನಾಥ ಶಿಶುವಿಗೆ ಒಂದು ತುತ್ತು ಅನ್ನ ಉಣಿಸಲಾರದ ದೇವರಲ್ಲೂ ಧರ್ಮದಲ್ಲೂ ನನಗೆ ನಂಬಿಕೆ ಇಲ್ಲ. ನೀವು ನಿಮ್ಮ ಧರ್ಮವೆಂದು ತುಂಬ ಜಂಭದಿಂದ ಹೇಳಿಕೊಳ್ಳುತ್ತೀರೋ ಅದನ್ನು ಅನುಷ್ಠಾನಕ್ಕೆ ತನ್ನಿ. ದೇವರು ನಿಮಗೆ ಒಳ್ಳೆಯದು ಮಾಡಲಿ’ ಎನ್ನುವ ಮೂಲಕ ಮಾನವೀಯ ಸೇವೆಯ ಮಹತ್ವವನ್ನು ಮನದಟ್ಟು ಮಾಡಿಕೊಟ್ಟರು. ಆತ್ಮವಿಶ್ವಾಸವೇ ಕಳೆದುಕೊಂಡಿದ್ದ ಭಾರತೀಯರಲ್ಲಿ ‘ನೀವು 33 ಕೋಟಿ ದೇವತೆಗಳನ್ನು ನಂಬದಿದ್ದರೂ ನಷ್ಟವಿಲ್ಲ. ಆದರೆ ನಿಮ್ಮ ಮೇಲೆ ನೀವೇ ನಂಬಿಕೆ ಕಳೆದುಕೊಂಡರೆ ಯಾವ ದೇವನೂ ಕಾಪಾಡಲಾರ’ ಎಂದು ಹೇಳಿ ಸಾಧಿಸುವ ಛಲವನ್ನು ಜಾಗೃತಗೊಳಿಸಿದರು.

ಸಹೋದರ ಸಂನ್ಯಾಸಿಯೊಬ್ಬ ಇವರ ಬಳಿ ಬಂದು, ‘ನಾನು ತಪಸ್ಸು ಮಾಡಿ, ಸಿದ್ಧಿ ಗಳಿಸಿ ಯೋಗಿಯಾಗಬೇಕಿದೆ. ನೀವು ನೋಡಿದರೆ ನನ್ನನ್ನು ಕೋತಿಗಳ ಸೇವೆಯಲ್ಲಿ ನಿಯೋಜಿಸಿದ್ದೀರಿ’ ಎಂದಾಗ ವಿವೇಕಾನಂದರು, ‘ಮೊದಲು ಯಾರಿಗಾದರೂ ಉಪಯೋಗಿ ಆಗು, ಆಮೇಲೆ ಯೋಗಿ ಆಗುವಂತೆ’ ಅಂತ ಹೇಳಿ ಆದರ್ಶದ ದೊಡ್ಡ ತತ್ತ್ವವನ್ನು ಸರಳವಾಗಿ ಬೋಧಿಸಿದ್ದರು. ಮತ್ತೊಬ್ಬ ಬಂದು, ‘ಪ್ರತಿನಿತ್ಯ ಧ್ಯಾನ ಮಾಡುತ್ತಿದ್ದೇನೆ. ಏಕಾಗ್ರತೆಯಾಗಲಿ, ಶಕ್ತಿಯಾಗಲಿ ಸಿದ್ಧಿಸುತ್ತಿಲ್ಲ’ ಎಂದಾಗ ‘ನೀನು ಹೇಗೆ ಧ್ಯಾನ ಮಾಡುತ್ತಿರುವಿ’ ಎಂದು ಕೇಳಿದರು ಸ್ವಾಮೀಜಿ. ‘ಬಾಗಿಲು, ಕಿಟಕಿ ಹಾಕಿ ಕಣ್ಮುಚ್ಚಿ ಧ್ಯಾನಕ್ಕೆ ಕೂರುತ್ತೇನೆ’ ಎಂದ ತರುಣ. ‘ನೀನು ಧ್ಯಾನ ಮಾಡುತ್ತಿರುವ ರೀತಿಯೇ ತಪು್ಪ. ಕಿಟಕಿ, ಬಾಗಿಲುಗಳನ್ನು ತೆಗೆದು ಹೊರಗೆ ಹೋಗಿ ನೊಂದವರ, ಕಷ್ಟದಲ್ಲಿದ್ದವರ ಕಣ್ಣೀರು ಒರೆಸಿ, ಒಮ್ಮೆ ಆ ಕಣ್ಣುಗಳಲ್ಲಿ ಸಾರ್ಥಕತೆಯನ್ನು ಕಾಣು. ಅದುವೇ ಧ್ಯಾನ’ ಎಂದು ಬಿಟ್ಟರು. ಮಾರ್ಗರೇಟ್ ನೊಬೆಲ್ ಅನ್ನು ಸೋದರಿ ನಿವೇದಿತಾ ಆಗಿಸಿ ಅವಳಿಂದ ರಾಷ್ಟ್ರನಿರ್ವಣದ ಸಾರ್ಥಕ ಪರಿಯನ್ನು ಅನಾವರಣಗೊಳಿಸಿದರು.

ಇಂದಿಗೂ ಎಷ್ಟೋ ಜನ ವಿವೇಕಾನಂದರೆಂದರೆ ಹಿಂದೂಸಂತ, ಉಪನ್ಯಾಸಕಾರ ಎಂದೆನ್ನುತ್ತಾರೆ. ಆದರೆ, ಶತಮಾನಗಳ ಜಡತ್ವವನ್ನು ನೀಗಿಸಿದ ಚೈತನ್ಯವಾಗಿ, ನಮ್ಮತನದ ಅರಿವು ಮೂಡಿಸಿದ ಯೋಗಿಯಾಗಿ, ಭಾರತಕ್ಕೆ ಹೊಸ ಚೈತನ್ಯ ಒದಗಿಸಿಕೊಟ್ಟು ಮಹಾನ್ ಮೇಧಾವಿಯಾಗಿ, ಮಾನವೀಯ ಮನಸ್ಸುಗಳನ್ನು ಒಂದುಮಾಡಿದ ಸಮನ್ವಯಕಾರನಾಗಿ ಸ್ವಾಮಿ ವಿವೇಕಾನಂದರು ಎಂದೆಂದಿಗೂ ನಮ್ಮ ಹೃದಯಗಳಲ್ಲಿ ವಿರಾಜಮಾನರಾಗಬೇಕು. ಏಕೆಂದರೆ, ವಿವೇಕಾನಂದರು ನಮ್ಮೊಳಗೆ ಒಮ್ಮೆ ಹೊಕ್ಕಿಬಿಟ್ಟರೆ ನಡೆಯುವುದು ಸಾಮಾನ್ಯ ಕ್ರಾಂತಿಯಲ್ಲ. ಇಡೀ ಮನುಕುಲಕ್ಕೆ ತಮ್ಮ ಹೃದಯದಲ್ಲಿ ಜಾಗ ನೀಡಿದ್ದ ವಿವೇಕಾನಂದರಿಗೆ ನಮ್ಮ ಹೃದಯಮಂದಿರದಲ್ಲಿ ಒಂದಿಷ್ಟಾದರೂ ಜಾಗ ನೀಡೋಣ. ಏಕೆಂದರೆ, ಭಾರತ ವಿಶ್ವಗುರು ಆಗಲು ದಾಪುಗಾಲು ಹಾಕುತ್ತಿರುವ ಹೊತ್ತಲ್ಲಿ ಸರಿಯಾದ ಪಥವನ್ನು ಆ ವಿವೇಕಾನಂದರು ತೋರದೆ ಇನ್ನಾರು ತೋರಿಯಾರು? ಅಲ್ಲವೇ?

Leave a Reply

Your email address will not be published. Required fields are marked *