ಅಂದು ಮುತ್ತುಲಕ್ಷ್ಮೀ ಇಂದು ಲಕ್ಷ್ಮೀ ಪಾರ್ವತಿ

ಬೆಂಗಳೂರು: ನಂದಮೂರಿ ಬಾಲಕೃಷ್ಣ ನಟಿಸಿರುವ ‘ಎನ್​ಟಿಆರ್: ಕಥಾನಾಯಕುಡು’ ಚಿತ್ರ ತೆರೆಕಂಡು ಪ್ರದರ್ಶನ ಕಾಣುತ್ತಿದ್ದರೆ, ಇನ್ನೊಂದೆಡೆ ಹಲವು ವಿರೋಧದ ನಡುವೆಯೂ ಎನ್​ಟಿಆರ್ ಕುರಿತು ಮತ್ತೊಂದು ಬಯೋಪಿಕ್ ಮಾಡುತ್ತಿದ್ದಾರೆ ನಿರ್ದೇಶಕ ರಾಮ್ ಗೋಪಾಲ್ ವರ್ವ. ಈಗಾಗಲೇ ತಿಳಿದಿರುವಂತೆ ಆ ಚಿತ್ರದ ಹೆಸರು ‘ಲಕ್ಷ್ಮೀಸ್ ಎನ್​ಟಿಆರ್’. ಅಂದರೆ, ಎನ್​ಟಿಆರ್ ಎರಡನೇ ಪತ್ನಿ ಲಕ್ಷ್ಮೀ ಪಾರ್ವತಿ ದೃಷ್ಟಿಕೋನದಲ್ಲಿ ಇಡೀ ಸಿನಿಮಾ ಸಾಗಲಿದೆಯಂತೆ. ಈ ಸುದ್ದಿ ಹೊರಬಂದ ದಿನದಿಂದಲೂ ಕಾಡಿದ ದೊಡ್ಡ ಪ್ರಶ್ನೆ ಎಂದರೆ, ಲಕ್ಷ್ಮೀ ಪಾರ್ವತಿ ಪಾತ್ರದಲ್ಲಿ ನಟಿಸುವುದು ಯಾರು? ಈವರೆಗೂ ಗುಟ್ಟಾಗಿದ್ದ ಈ ವಿಚಾರವನ್ನು ಇದೀಗ ಸ್ವತಃ ವರ್ವ ಬಹಿರಂಗ ಪಡಿಸಿದ್ದು, ಕನ್ನಡದ ನಟಿ ಯಜ್ಞಾ ಶೆಟ್ಟಿ ಪಾಲಿಗೆ ದೊಡ್ಡ ಅವಕಾಶ ಒಲಿದುಬಂದಿದೆ. ಸದ್ಯ ಶೂಟಿಂಗ್​ನಲ್ಲಿ ಪಾಲ್ಗೊಂಡಿರುವ ಅವರು ಲಕ್ಷ್ಮೀ ಪಾರ್ವತಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲ ಬಾರಿಗೆ ಎನ್​ಟಿಆರ್ ಆವರನ್ನು ಲಕ್ಷ್ಮೀ ಪಾರ್ವತಿ ಭೇಟಿ ಮಾಡಿದ ಕ್ಷಣದಿಂದ ಹಿಡಿದು, ಎನ್​ಟಿಆರ್ ನಿಧನದವರೆಗೂ ಕಥೆ ಸಾಗಲಿದೆಯಂತೆ. ಎನ್​ಟಿಆರ್ ರಾಜಕೀಯ ಜೀವನ ಮತ್ತು ಫ್ಯಾಮಿಲಿ ಡ್ರಾಮಾ ಪ್ರಧಾನವಾಗಿ ಇರಲಿದೆ. ಅಷ್ಟಕ್ಕೂ ಈ ಚಿತ್ರಕ್ಕೆ ಯಜ್ಞಾ ಆಯ್ಕೆ ಆಗಿದ್ದು ಹೇಗೆ? ‘ಈ ಮೊದಲೇ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರದಲ್ಲಿ ಆರ್​ಜಿವಿ ಜತೆ ಕೆಲಸ ಮಾಡಿದ್ದೆ. ಅಲ್ಲಿ ನನಗೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಪಾತ್ರ ಸಿಕ್ಕಿತ್ತು. ಈಗ ಲಕ್ಷ್ಮೀ ಪಾರ್ವತಿ ಪಾತ್ರಕ್ಕೆ ಸಿಂಪಲ್ ಆಗಿರುವ ಮತ್ತು ಅಭಿನಯದಲ್ಲಿ ಹಿಡಿತ ಇರುವ ನಟಿಗಾಗಿ ಆರ್​ಜಿವಿ ಹುಡುಕುತ್ತಿದ್ದರು. ನಾನು ಈ ಪಾತ್ರ ಮಾಡಬಲ್ಲೆ ಎಂಬ ನಂಬಿಕೆ ಅವರಿಗೆ ಮೂಡಿತು. ಲುಕ್ ಟೆಸ್ಟ್ ಬಳಿಕ ಆಯ್ಕೆಯಾದೆ’ ಎಂದು ಮಾಹಿತಿ ನೀಡುತ್ತಾರೆ ಯಜ್ಞಾ.

ಅಂದಹಾಗೆ, ಅವರಿಗೆ ಅಷ್ಟು ಚೆನ್ನಾಗಿ ತೆಲುಗು ಮಾತನಾಡಲು ಬರುವುದಿಲ್ಲವಂತೆ. ಹಾಗಾಗಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ, ಸಾಕಷ್ಟು ತಯಾರಿ ಮಾಡಿಕೊಂಡು ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ. ‘ತೆಲುಗು ಸಾಹಿತ್ಯದಲ್ಲಿ ಬಂಗಾರದ ಪದಕ ಪಡೆದವರು ಲಕ್ಷ್ಮೀ ಪಾರ್ವತಿ. ಅವರ ಭಾಷಾ ಚಾತುರ್ಯಕ್ಕೆ ತಕ್ಕಂತೆ ನಾನು ಡೈಲಾಗ್ ಹೇಳಬೇಕೆಂದರೆ ಸುಲಭವಲ್ಲ. ಅದೇ ನನಗೆ ಹೆಚ್ಚು ಸವಾಲು ಎನಿಸಿತು’ ಎಂಬುದು ಯಜ್ಞಾ ಮಾತು. ಎನ್​ಟಿಆರ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಯಾರು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

ವೃತ್ತಿಬದುಕಿನಲ್ಲಿ ಮತ್ತೆ ಮತ್ತೆ ರಿಯಲ್ ಲೈಫ್ ಪಾತ್ರ ಸಿಗುತ್ತಿರುವುದಕ್ಕೆ ಖುಷಿ ಇದೆ. ಲಕ್ಷ್ಮೀ ಪಾರ್ವತಿ ಪಾತ್ರ ನಿಜಕ್ಕೂ ಚಾಲೆಂಜಿಂಗ್. ಇನ್ನೂ ಚಿತ್ರೀಕರಣ ಬಾಕಿ ಇದೆ. ಹಾಗಾಗಿ ಈಗಲೇ ನಾನು ಹೆಚ್ಚೇನೂ ಹೇಳುವಂತಿಲ್ಲ.

| ಯಜ್ಞಾ ಶೆಟ್ಟಿ, ನಟಿ