ಅಂತೂ ಬಲೆಗೆ ಬಿದ್ದ ಕೀಟಲೆ ಕೋತಿ!

ಭಟ್ಕಳ: ತಾಲೂಕಿನ ಮುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯರಿಗೆ ಉಪಟಳ ನೀಡುತ್ತಿದ್ದ ಲಂಗರು ಜಾತಿಯ ವಾನರ ಕೊನೆಗೂ ಭಟ್ಕಳ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ. ಇದರಿಂದ ಇಲ್ಲಿನ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಒಂದು ವರ್ಷದಿಂದ ಮಂಗವೊಂದು ರಿಕ್ಷಾ ಸೇರಿ ಇತರ ವಾಹನ ಹಾಗೂ ಸ್ಥಳೀಯರ ಮೇಲೆ ದಾಳಿ ಮಾಡಲು ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಏ.11ರಂದು ‘ಮಂಗನ ಹಾವಳಿಗೆ ಬೇಸತ್ತ ಜನ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ವರದಿಯನ್ನು ಗಂಭೀರವಾಗಿ ಪರಿಗಣಿಸಿದ ವಲಯ ಅರಣ್ಯ ಅಧಿಕಾರಿಗಳು ಮಾರನೇ ದಿನವೇ ಎಸಿಎಫ್ ಬಾಲಚಂದ್ರ ನೇತೃತ್ವದಲ್ಲಿ ಶಿವಮೊಗ್ಗ ವೈಲ್ಡ್ ಲೈಫ್ ಡಿವಿಜನ್ ಸಿನಿಯರ್ ವೆಟರ್ನರಿ ಆಫಿಸರ್ ಡಾ. ವಿನಯ ಎಸ್. ಮಂಗನನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದರು.

ಮಂಡಳ್ಳಿಯಲ್ಲಿ ಪಕ್ಕಪಕ್ಕದಲ್ಲಿ ತೆಂಗಿನ ಮರಗಳು ಇದ್ದುದರಿಂದ ಮಂಗನನ್ನು ಹಿಡಿಯುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹರಸಾಹಸವಾಗಿತ್ತು. ತುಂಟ ಮಂಗನಿಗೆ ಅರವಳಿಕೆ ಇಂಜೆಕ್ಷನ್ ನೀಡಲು ಗುರಿ ಇಟ್ಟ ಕೂಡಲೇ ಅದು ಇನ್ನೊಂದು ಮರಕ್ಕೆ ಹಾರಿ ತಪ್ಪಿಸಿಕೊಳ್ಳುತ್ತಿತ್ತು. ಮೂರು ದಿನಗಳ ಬಳಿಕ ಅರಣ್ಯ ಇಲಾಖೆಯ ಪ್ರಯತ್ನಕ್ಕೆ ಫಲ ದೊರಕಿದ್ದು, ವರ್ಷದಿಂದ ಸ್ಥಳೀಯನ್ನು ಕಾಡುತ್ತಿದ್ದ ವಾನರ ಸೆರೆಯಾಗಿದೆ. ಕಾರ್ಯಾಚರಣೆಯಲ್ಲಿ ಡಾ. ಸುಜಯ ಶಿವಮೊಗ್ಗ, ಡಿಆರ್​ಎಫ್​ಒ ಪ್ರಮೋದ, ಮಲ್ಲಿಕಾರ್ಜುನ, ಎಫ್.ಜಿ. ಪುಂಡಲೀಕ, ಶೇಶು ಮತ್ತು ಜಯದೀಪ ಇದ್ದರು.

ಕಳೆದ ವರ್ಷದಿಂದ ಸ್ಥಳೀಯರನ್ನು ಕಾಡುತ್ತಿದ್ದ ವಾನರನನ್ನು ಸೆರೆ ಹಿಡಿಯುವಲ್ಲಿ ಯಶಸ್ಸು ದೊರಕಿದೆ. ಅರವಳಿಕೆ ಇಂಜೆಕ್ಷನ್ ನೀಡಿ ಮಂಗನನ್ನು ಹಿಡಿದು, ಅದಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಮಂಗ ಆರೋಗ್ಯವಾಗಿದ್ದು ಅದನ್ನು ಬನ್ನೇರುಘಟ್ಟದ ಮೃಗಾಲಯಕ್ಕೆ ಸಾಗಿಸಲಾಗುವುದು. | ಬಾಲಚಂದ್ರ ಎಸಿಎಫ್ ಭಟ್ಕಳ

***