ಅಂತಿಮ ಹಂತದಲ್ಲಿ ಸುರಂಗ ಕಾಮಗಾರಿ

ಕಾರವಾರ:ನಗರದಲ್ಲಿ ಕರ್ನಾಟಕದ ಮೊದಲ ರಾಷ್ಟ್ರೀಯ ಹೆದ್ದಾರಿ ಸುರಂಗ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ.

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ವಿಸ್ತರಣೆಯ ಭಾಗವಾಗಿ ಬಿಣಗಾದಿಂದ ಕಾರವಾರದವರೆಗೆ ಜಿಲ್ಲಾಧಿಕಾರಿ ನಿವಾಸ ಇರುವ ಗುಡ್ಡದಲ್ಲಿ ಸುರಂಗ ಮಾರ್ಗ ಕೊರೆಯಲಾಗುತ್ತಿದ್ದು, ಒಂದು ಭಾಗದ ಅಂತಿಮ ಹಂತದ ಕಾಮಗಾರಿಗಳು (ಫಿನಿಶಿಂಗ್ )ಪ್ರಗತಿಯಲ್ಲಿವೆ.

ಈ ಸುರಂಗ ರಸ್ತೆ ಸಂಚಾರಕ್ಕೆ ತೆರೆದುಕೊಂಡಲ್ಲಿ ಬಿಣಗಾ ಹಾಗೂ ಕಾರವಾರದ ನಡುವಿನ 4.5 ಕಿಮೀ ಅಂತರ ಕೇವಲ 1 ಕಿಮೀಗೆ ಇಳಿಕೆಯಾಗಲಿದೆ.

ಎರಡು ಹಂತ: ಒಟ್ಟಾರೆ 1144 ಮೀಟರ್ ಉದ್ದದ ಸುರಂಗ ಕಾಮಗಾರಿ ನಡೆದಿದೆ. ಅದು ಎರಡು ಹಂತದಲ್ಲಿದೆ. ಒಂದು 550 ಮೀಟರ್ ಹಾಗೂ ಇನ್ನೊಂದು 594 ಮೀಟರ್ ಉದ್ದದ ಸುರಂಗಕ್ಕೆ ಯೋಜಿಸಲಾಗಿತ್ತು. ಆದರೆ, ಅದಕ್ಕಿಂತ ಕಡಿಮೆ ಅಂತರದಲ್ಲಿ ಅಂದರೆ ಎರಡೂ ಸುರಂಗಗಳು ಸುಮಾರು 300 ಮೀಟರ್ ಉದ್ದಕ್ಕೆ ಕೊರೆಯಲಾಗಿದೆ. ಬಿಣಗಾದಿಂದ ಹೊರಟ ಸುರಂಗ ಅಲಿಗದ್ದಾದಲ್ಲಿ ತೆರೆದುಕೊಳ್ಳುತ್ತದೆ. ನಂತರ ಮತ್ತೆ ಗುಡ್ಡದ ಒಳಹೊಕ್ಕು ಕಾರವಾರ ಲಂಡನ್ ಬ್ರಿಜ್ ಬಳಿ ತೆರೆದುಕೊಳ್ಳಲಿದೆ.

ರಾಜ್ಯದ ಮೊದಲ ಹೆದ್ದಾರಿ ಸುರಂಗ

ರೈಲು ಮಾರ್ಗಗಳು ಉದ್ದುದ್ದ ಸುರಂಗದಲ್ಲಿ ನಿರ್ವಣವಾಗಿವೆ. ಆದರೆ, ಸುರಂಗದ ಮೂಲಕ ರಾಷ್ಟ್ರೀಯ ಹೆದ್ದಾರಿ ಸಾಗಿರುವುದು ಅಪರೂಪ. ಭಾರತ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೆಲವೇ ಸುರಂಗಗಳ ಪೈಕಿ ಕಾರವಾರದ ಸುರಂಗವೂ ಒಂದಾಗಿರಲಿದೆ. ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೊದಲ ಸುರಂಗ ಎಂಬ ಹೆಮ್ಮೆ ಇದಕ್ಕಿರಲಿದೆ. ದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೆಚ್ಚಿನ ಸುರಂಗಗಳು ಗುಡ್ಡ ಪ್ರದೇಶದಲ್ಲಿವೆ. ಆದರೆ, ಸಮುದ್ರ ಮಟ್ಟದಿಂದ ಅತೀ ಕಡಿಮೆ ಅಂತರದಲ್ಲಿ ನಿರ್ವಣವಾದ ಮೊದಲ ಸುರಂಗ ಇದಾಗಿದೆ.

ಸಂಚಾರಕ್ಕ ಇನ್ನೂ ವಿಳಂಬ?: 2015ರಿಂದಲೇ ಸುರಂಗ ಕಾಮಗಾರಿ ಪ್ರಾರಂಭಿಸಲಾಗಿತ್ತು. ಸಂಪೂರ್ಣ ಕಲ್ಲಿನಿಂದ ಕೂಡಿರುವ ಜಾಗವನ್ನು ಕೊರೆಯಲು ಚತುಷ್ಪಥ ಗುತ್ತಿಗೆ ಪಡೆದ ಐಆರ್​ಬಿ ಹರಸಾಹಸಪಟ್ಟಿತು. ಎರಡು ತಿಂಗಳ ಹಿಂದೆ ಸುರಂಗ ಬಿಣಗಾದಿಂದ ಕಾರವಾರದವರೆಗೆ ತೆರೆದುಕೊಂಡಿದೆ. ಇನ್ನೊಂದು ಭಾಗದ ಕಾಮಗಾರಿ ಇನ್ನೂ ಬಾಕಿ ಇದೆ. ಸುರಂಗ ಕಾಮಗಾರಿ ಮುಗಿದರೂ ಸಂಪೂರ್ಣ ಪರಿಶೀಲನೆಗೂ ಮುಂಚೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆ ಕಡಿಮೆ ಇದೆ.

ದೇಶದ ಏಳನೇ ಉದ್ದದ ಸುರಂಗ

ಚೆನ್ನೈ-ನಾಶ್ರೀ ಹೆದ್ದಾರಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಉದಂಪುರ ಬಳಿ ಇರುವ ಸುರಂಗವು (9.2 ಕಿಮೀ) ದೇಶದ ಅತೀ ಉದ್ದದ ಹೆದ್ದಾರಿ ಸುರಂಗವಾಗಿದೆ. ಮುಂಬೈ -ಪುಣೆ ಎಕ್ಸ್​ಪ್ರೆಸ್ ಹೈವೆಯಲ್ಲಿ ಕಾಮಾಶೇಟ್ ಸುರಂಗ (1.8 ಕಿಮೀ) ಕರಾವಳಿಯ ಅತಿ ಉದ್ದದ ಸುರಂಗವಾಗಿದೆ. ಕಾರವಾರ -ಬಿಣಗಾ ಸುರಂಗ ವಾಹನ ಸಂಚಾರಕ್ಕೆ ತೆರೆದುಕೊಂಡಲ್ಲಿ ಇದು ದೇಶದ ಏಳನೇ ಅತೀ ಉದ್ದದ ಹೆದ್ದಾರಿ ಸುರಂಗವಾಗಲಿದೆ.