ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಾಂಸ್ಕೃತಿಕ ಮಹೋತ್ಸವ ಹಾಗೂ ಕ್ಷಮತಾ ಸೇವಾ ಸಂಸ್ಥೆ ಸಹಯೋಗದಲ್ಲಿ ಜ. 21 ಹಾಗೂ 22ರಂದು ಅಂತಾರಾಷ್ಟ್ರೀಯ ಗಾಳಿಪಟ ಹಾಗೂ ಸಾಂಸ್ಕೃತಿಕ ಉತ್ಸವ ನಗರದ ಜೆ.ಕೆ. ಶಾಲೆ ಮಾರ್ಗದ ವೆಂಕಟರಮಣ ದೇವಸ್ಥಾನ ಎದುರಿನ ಜಾಗದಲ್ಲಿ ಏರ್ಪಡಿಸಲಾಗಿದೆ ಎಂದು ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಳಿಪಟದ ಉತ್ಸವದಲ್ಲಿ ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್ ಸೇರಿ ಒಟ್ಟು 15 ದೇಶಗಳಿಂದ 25 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಎಲ್ಲ ವಯಸ್ಸಿನವರು ಕುಟುಂಬ ಸಮೇತ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜ. 21ರಂದು ಬೆಳಗ್ಗೆ 10.30ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಧ್ಯಕ್ಷತೆ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಸೇರಿ ಇತರರು ಭಾಗವಹಿಸುವರು ಎಂದರು.
ಬೆಳಗ್ಗೆ 11ಗಂಟೆಗೆ 9ರಿಂದ 12 ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಎಕ್ಸಾಮ್ ವಾರಿಯರ್ಸ್ ಪುಸ್ತಕದ ಕುರಿತು ‘ಪರೀಕ್ಷಾ ಪೇ ಚರ್ಚೆ’ ನಡೆಯಲಿದೆ. ಸಭಾಪತಿ ಬಸವರಾಜ ಹೊರಟ್ಟಿ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿವ ಮುನಿರತ್ನ ಉದ್ಘಾಟಿಸುವರು.
ಜ. 22ರಂದು ಮಧ್ಯಾಹ್ನ 12.30ಕ್ಕೆ ದೇಸಿ ಕ್ರೀಡೆಗಳಿಗೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡುವರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಚಿವ ಸಿ.ಸಿ. ಪಾಟೀಲ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ ಭಾಗವಹಿಸುವರು ಎಂದರು.
21ರಂದು ಬೆಳಗ್ಗೆ 10.30ಕ್ಕೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, 11 ಗಂಟೆಗೆ ಆಹಾರ ಉತ್ಸವ, 11.30ಕ್ಕೆ ಕ್ರೀಡೆ ಮತ್ತು ಮನೋರಂಜನೆ, ಸಂಜೆ 5.30ಕ್ಕೆ ರಾಘವೇಂದ್ರ ಆಚಾರ್ಯ ಅವರಿಂದ ಸ್ಟ್ಯಾಂಡಪ್ ಕಾಮಿಡಿ, ಸಂಜೆ 6.30ಕ್ಕೆ ಅನನ್ಯ ಭಟ್, ಚೇತನ ನಾಯಕ್, ಆಲ್ ಓಕೆ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. 22ರಂದು ಬೆಳಗ್ಗೆ 9.30ಕ್ಕೆ ವಿಶಿಷ್ಟ ಗಾಳಿಪಟ ಹಾರಾಟ, ಮಧ್ಯಾಹ್ನ 12.30ಕ್ಕೆ ದೇಸಿ ಕೀಡಾಕೂಟ, ಸಂಜೆ 6.30ಕ್ಕೆ ವಾಸುಕಿ ವೈಭವ್, ಅನುರಾಧಾ ಭಟ್, ಸಂಗೀತಾ ರವೀಂದ್ರನಾಥ್, ಅಶ್ವಿನ್ ಶರ್ವ, ಮಹನ್ಯಾ ಪಾಟೀಲ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಲಿವೆ ಎಂದರು. ಮೇಯರ್ ಈರೇಶ ಅಂಚಟಗೇರಿ, ಮುರಳೀಧರ ಮಳಗಿ, ಮಲ್ಲಿಕಾರ್ಜುನಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.