ಕೊಪ್ಪಳ: ಸರ್ಕಾರಿ ಕಾಮಗಾರಿಗೆ ಬಳಸಿದ್ದ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ನಗದು ಸೇರಿ ಬರೋಬ್ಬರಿ 46 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದ ಶೇಖ್ ಜಹೀರ್, ಮಾಲೋಜಿ, ನಾನಾ ಸಾಹೇಬ್ ಬಂಧಿತರು. ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಸೀಮಾ ವ್ಯಾಪ್ತಿಯಲ್ಲಿ ಕೊಪ್ಪಳ ಏತ ನೀರಾವರಿ ಕಾಮಗಾರಿ ನಡೆಯುತ್ತಿದೆ. ನೀರು ಪಂಪ್ ಮಾಡಲು ಪಂಪ್‌ಹೌಸ್ ಅಳವಡಿಸಿದ್ದು, ಬೃಹದಾಕಾರದ ಟಿಸಿ (ವಿದ್ಯುತ್ ಪರಿವರ್ತಕ) ಅಳವಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಚಾಲಾಕಿ ಕಳ್ಳರು ಟಿಸಿ ಕವರ್ ಬಿಚ್ಚಿ, ಅದರೊಳಗಿನ ಬೆಲೆ ಬಾಳುವ ತಾಮ್ರವನ್ನು ಕದಿಯುತ್ತಿದ್ದರು.
ನಂತರ ಮೊದಲಿನಂತೆ ಕವರ್ ಮುಚ್ಚುತ್ತಿದ್ದರು. ಕಳೆದ ಎರಡು ವರ್ಷದಿಂದ ನಾಲ್ಕೈದು ಬಾರಿ ಕೃತ್ಯ ಎಸಗಿದ್ದಾರೆ. ಕಾಮಗಾರಿ ಸ್ಥಗಿತಗೊಂಡಿದ್ದು, ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಸಹ ಇಲ್ಲ. ಹೀಗಾಗಿ ಕಳ್ಳತನ ಗಮನಕ್ಕೆ ಬಂದಿಲ್ಲ. ಕಳೆದ ಜೂನ್ 21ರಂದು ಗಮನಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಒಟ್ಟು 25.5ಲಕ್ಷ ರೂ. ಮೌಲ್ಯದ 30 ಸಾವಿರ ಲೀಟರ್ ಟಿಸಿ ಆಯಿಲ್ ಮತ್ತು 93 ಲಕ್ಷ ರೂ. ಮೌಲ್ಯದ 9.3ಟನ್ ತಾಮ್ರ ತಂತಿ ಎಗರಿಸಿರುವುದು ಬೆಳಕಿಗೆ ಬಂದಿದೆ ಎಂದು ಎಸ್ಪಿ ಯಶೋದಾ ವಂಟಗೋಡಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಂಧಿತರಿಂದ 8ಲಕ್ಷ ರೂ. ನಗದು, 3 ಲಕ್ಷ ರೂ. ಬೆಲೆಯ 3 ಕ್ವಿಂಟಾಲ್ ತಾಮ್ರ, 10 ಲಕ್ಷ ರೂ.ನ ಜೈಲೊ ಕಾರ್, 20ಲಕ್ಷ ರೂ.ನ ಐಶರ್ ಟ್ರಕ್ ಮತ್ತು 3 ಮೊಬೈಲ್ ಸೇರಿ 46 ಲಕ್ಷ ರೂ. ಸ್ವತ್ತು ವಶಪಡಿಸಿಕೊಳ್ಳಲಾಗಿದೆ. ಯಶಸ್ವಿಯಾಗಿ ಪ್ರಕರಣ ಭೇದಿಸಿದ ಸಿಬ್ಬಂದಿಗೆ ಐಜಿ ಒಂದು ಲಕ್ಷ ರೂ. ಹಾಗೂ ನಾನು 25 ಸಾವಿರ ರೂ. ಬಹುಮಾನ ಘೋಷಿಸಿದ್ದೇನೆಂದು ಹೇಳಿದರು. ಡಿವೈಎಸ್ಪಿ ಶರಣಪ್ಪ ಸುಬೇದಾರ, ಸಿಪಿಐ ಮೌನೇಶ್ವರ ಪಾಟೀಲ್, ಪಿಐಗಳಾದ ಅಮರೇಶ ಹುಬ್ಬಳ್ಳಿ, ಆಂಜನೇಯ ಡಿ.ಎಸ್., ಪಿಎಸ್‌ಐ ಪ್ರಶಾಂತ ಇತರ ಸಿಬ್ಬಂದಿ ಇದ್ದರು.