ಅಂತಾರಾಜ್ಯ ಗ್ಯಾಂಗ್ ಪತ್ತೆ; ಮೂವರ ಬಂಧನ, ಇಬ್ಬರು ಪರಾರಿ

ಗದಗ: ಅಂತಾರಾಜ್ಯ ಕಾರುಗಳ್ಳತನದ ಗ್ಯಾಂಗ್ ಅನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸರು ಮೂವರನ್ನು ಬಂಧಿಸಿ 66 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 10 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ ಬಾಬು ‘ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದವರಾದ ಭೀಮಪ್ಪ ವೆಂಕೋಬಪ್ಪ ಶೆಟ್ಟಿಬಲೀಜಿಗ, ಬಾಬಾ ಫಕ್ರುದ್ದೀನ್ ಕಾಶೀಂಸಾಬ್ ಪಿಂಜಾರ, ಹುಬ್ಬಳ್ಳಿ ನೇಕಾರನಗರದ ಶಿವಕುಮಾರ ಮಹಾದೇವಪ್ಪ ಜಾವೂರ ಬಂಧಿತರು. ಅವರಿಂದ 5 ಸ್ವಿಫ್ಟ್, 2 ಹುಂಡೈ, 1 ರೆನಾಲ್ಟ್, 1 ಹೊಂಡಾ, 1 ಶವರ್ಲೆ ಕಾರು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ಕಿಂಗ್ ಪಿನ್ ಪರಾರಿ: ಪ್ರಮುಖ ಆರೋಪಿಗಳಾದ ಬಂಟ್ವಾಳ ತಾಲೂಕಿನ ಈರಾ ಗ್ರಾಮದ ಮಹ್ಮದ್ ಹನೀಫ್ ಬಡುವನಕುನ್ನಿ ಮತ್ತು ಉಡುಪಿ ತಾಲೂಕಿನ ಮಣಿಪೂರ ಗ್ರಾಮದ ಇಕಾಸ್ ಪರಾರಿಯಾಗಿದ್ದು, ಪರಾರಿಯಾದ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ. ಪರಾರಿಯಾದ ಈ ಇಬ್ಬರು ಆರೋಪಿಗಳೇ ಪ್ರಮುಖ ಕಾರುಗಳ್ಳರಾಗಿದ್ದು, ಬಂಧಿತರಾದವರಿಗೆ ಕದ್ದ ಕಾರುಗಳನ್ನು ಮಾರಾಟ ಮಾಡಲು ನೀಡುತ್ತಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ ಎಂದು ಅವರು ವಿವರಿಸಿದರು.

ಬೆಟಗೇರಿ ಪಿಎಸ್​ಐ ಅವರು ಸ್ಥಳೀಯ ಗಾಂಧಿನಗರದ ಬಳಿ ಮಾರುತಿ ದೇವಸ್ಥಾನದ ಹತ್ತಿರ ಗದಗದಿಂದ-ಬೆಟಗೇರಿ ಕಡೆಗೆ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ತಡೆದು ದಾಖಲೆ ಕೇಳಿದ್ದಾರೆ. ದಾಖಲೆ ನೀಡಲು ಆರೋಪಿಗಳು ತಡಬಡಾಯಿಸಿದ್ದರಿಂದ ಅನುಮಾನಗೊಂಡು ಹೆಚ್ಚಿನ ತನಿಖೆಗೆ ಒಳಪಡಿಸಿದ ಮೇಲೆ ಕಾರುಗಳ್ಳತನ ಮಾಡಿದ್ದು ಗೊತ್ತಾಗಿದೆ ಎಂದು ಹೇಳಿದರು.

ಎಸ್ಪಿ ಮಾರ್ಗದರ್ಶನದಲ್ಲಿ ಡಿಎಸ್​ಪಿ ನೇತೃತ್ವದಲ್ಲಿ ಬೆಟಗೇರಿ ಠಾಣೆ ಪಿಎಸ್​ಐ ಎಂ.ಡಿ.ಮಡ್ಡಿ, ಶಹರ ಠಾಣೆ ಪಿಎಸ್​ಐ ಎಸ್.ಜಿ. ಸುಬ್ಬಾಪುರಮಠ, ಸಿಬ್ಬಂದಿ ಆರ್.ವಿ. ಪವಾರ, ಎನ್.ಎ.ಮೌಲ್ವಿ, ಎಚ್.ಐ.ಕಲ್ಲಣ್ಣವರ, ಲಕ್ಷ್ಮಣ ಪೂಜಾರ, ಪಿ.ಎಚ್.ದೊಡ್ಡಮನಿ, ಡಿ.ಎಚ್.ಮಂಜಲಾಪುರ, ವಿ.ಎಂ.ಬಡಿಗೇರ, ಎ.ಪಿ.ದೊಡ್ಡಮನಿ, ವಿ.ಎಸ್.ಶೆಟ್ಟಣ್ಣವರ, ಎಸ್.ಎ.ಗುಡ್ಡಿಮಠ, ವೈ.ಎಚ್.ಮಾದರ, ಎ.ಐ.ಬಚ್ಚೇರಿ, ಎಂ.ಎಂ.ಬನ್ನಿಕೊಪ್ಪ, ಎ.ಎಫ್.ಹಣಜಿ, ಎಸ್.ಸಿ.ಕೊರಡೂರ, ಎಸ್.ಎಂ.ಹುಲ್ಲೂರ, ವಿ.ಎ.ಗಡಾದ, ಕೆ.ಎ. ಮುಲ್ಲಾನವರ, ಜಿ.ಬಿ. ಬೂದಿಹಾಳ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.