ಅಂತರ ಕಾಲೇಜು ಮ್ಯಾನೇಜ್‌ಮೆಂಟ್ ಫೆಸ್ಟ್

ಚಾಮರಾಜನಗರ: ವಿದ್ಯಾರ್ಥಿ ದಿಸೆಯಿಂದಲೇ ಹೆಚ್ಚು ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಂಡಾಗ ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಪ್ರಭುತ್ವವನ್ನು ಸಾಧಿಸಬಹುದಾಗಿದೆ ಎಂದು ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರಮೇಶ್ ತಿಳಿಸಿದರು.

ನಗರದ ಸೇವಾ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಂತರ ಕಾಲೇಜು ಮ್ಯಾನೇಜ್‌ಮೆಂಟ್ ಫೆಸ್ಟ್ ವಲ್ಲಭ -2019 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಡತ್ವವನ್ನು ಬಿಟ್ಟು ವ್ಯಕ್ತಿತ್ವ ವಿಕಸನದ ಕಡೆಗೆ ಎಲ್ಲರೂ ಸಾಗಬೇಕು. ಕೇವಲ ಪದವಿ ಪಡೆದುಕೊಂಡರಷ್ಟೆ ಸಾಲದು ಇಂತಹ ಮ್ಯಾನೇಜಮೆಂಟ್ ಫೆಸ್ಟ್‌ನಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ತಿಳಿಸುವಂತಾಗಬೇಕು ಎಂದರು.

ಇಂತಹ ಕಾರ್ಯಕ್ರಮಗಳಿಂದ ಬೇರೆ ಕಾಲೇಜುಗಳ ವಾತಾವರಣ ಮತ್ತು ವಿದ್ಯಾರ್ಥಿಗಳ ನಡುವಿನ ಸ್ನೇಹ ಸಂಬಂಧ ವೃದ್ಧಿಯಾಗುತ್ತದೆ. ವಲ್ಲಭ -2019 ಪ್ರಥಮ ಪ್ರಯತ್ನವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಘಟನಾತ್ಮಕ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಕೋರಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆಎಸ್‌ಎಸ್ ರುಡ್‌ಸೆಟ್ ಸಂಸ್ಥೆಯ ನಿವೃತ್ತ ಅಧಿಕಾರಿ ಸುರೇಶ್, ವಿದ್ಯಾರ್ಥಿಗಳಿಗೆ ಜ್ಞಾನದ ದಾಹವನ್ನು ನೀಗಿಸುವ ಜತೆಗೆ ಪ್ರಪಂಚದ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶವಿದೆ. ಸಂವಾದ, ಸಂಪನ್ಮೂಲ ವ್ಯಕ್ತಿಗಳಿಂದ ಪ್ರವಚನ, ರಸಪ್ರಶ್ನೆ, ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಕಾರ್ಯಕ್ರಮಗಳು ಇರುತ್ತದೆ. ಈ ಕಾರ್ಯಕ್ರಮ ನಿಮ್ಮೆಲ್ಲರ ಬೆಳೆವಣಿಗೆಗೆ ನಾಂದಿಯಾಗುತ್ತಿವೆ ಎಂದರು.

ಕಾಲೇಜಿನ ಸಂಯೋಜಕ ಪ್ರದೀಪ್‌ಕುಮಾರ್ ದೀಕ್ಷೀತ್ ಮಾತನಾಡಿ, ಈ ಫೆಸ್ಟ್‌ನಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಆಗಮಿಸಿದ್ದಾರೆ. ಇದರಿಂದ ಪರೀಕ್ಷೆಗಳಿಗೆ ಪೂರಕವಾದ ವಿಷಯಗಳನ್ನು ತಿಳಿದುಕೊಳ್ಳಲು ಹೆಚ್ಚಿನ ಅವಕಾಶವಿದೆ ಎಂದರು.

ಪ್ರಥಮ ದರ್ಜೆ ಕಾಲೇಜು ವಿಭಾಗದ ಪ್ರಾಂಶುಪಾಲರಾದ ಡಾ. ನಿರ್ಮಲಾ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಸುರೇಶ್, ಸಹ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.