ಅಂತರ್ಜಲವಿಲ್ಲದೆಡೆ ಕೊಳವೆಬಾವಿ ಕೊರೆಸದಿರಿ

ಕೋಲಾರ: ಜಿಲ್ಲೆಯಲ್ಲಿ 10 ವರ್ಷಗಳಿಂದ ಅಂತರ್ಜಲ ಪ್ರಮಾಣ ಕಡಿಮೆಯಾಗಿದೆ, ನೀರಿನ ಸಮಸ್ಯೆ ಇರುವುದರಿಂದ ಹೊಸದಾಗಿ ಕೊಳವೆಬಾವಿ ಕೊರೆಸಲು ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾಗುತ್ತಿದ್ದು, ಅಧಿಕಾರಿಗಳು ವಸ್ತುಸ್ಥಿತಿ ಅರಿಯದೆ ಬೇಕಾಬಿಟ್ಟಿ ಕೊಳವೆಬಾವಿ ಕೊರೆಸಬಾರದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಗಣಿ ಮತ್ತು ಭೂ ವಿಜ್ಞಾನ (ಅಂತರ್ಜಲ) ಸಣ್ಣ ನೀರಾವರಿ ಇಲಾಖೆ, ಬಿ.ಆರ್.ಅಂಬೇಡ್ಕರ್ ಹಾಗೂ ಡಿ.ದೇವರಾಜ ಅರಸು ನಿಗಮದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಳೆಯಿಲ್ಲದೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಕೊಳವೆಬಾವಿ ಕೊರೆಸಿದರೂ ಕೆಲವೆಡೆ ನೀರು ಸಿಗುತ್ತಿಲ್ಲ. ಅಧಿಕಾರಿಗಳು ನೀರಿಲ್ಲದ ಕಡೆ ಕೊಳವೆಬಾವಿ ಕೊರೆಸಿ ಏಜೆನ್ಸಿಗಳನ್ನು ಉದ್ದಾರ ಮಾಡುತ್ತಿದ್ದೀರಾ ಎಂದು ಕಿಡಿಕಾರಿದರು.

ಕೊಳವೆಬಾವಿ ಬೇಕೆಂದು ಅರ್ಜಿ ಸಲ್ಲಿಸುವ ಯಾರೇ ಆಗಿರಲಿ ಅವರಿಗೆ ಅಂತರ್ಜಲ ಮಟ್ಟದ ಬಗ್ಗೆ ನಿಖರ ಮಾಹಿತಿ ನೀಡಬೇಕು, ನೀರಿಲ್ಲದ ಕಡೆ ಲಕ್ಷಾಂತರ ರೂ. ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರೆ ಏನು ಪ್ರಯೋಜನ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ನೀರು ಸಿಗದಿದ್ದರೂ ಬೋರ್​ವೆಲ್ ಕೊರೆಸಿ ಬಿಲ್ ಮಾಡಿಕೊಂಡಿರುವ ಏಜೆನ್ಸಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಅಂತರ್ಜಲ ಇಲಾಖೆ ವಿಜ್ಞಾನಿ ತಿಪ್ಪೇಸ್ವಾಮಿಯನ್ನು ಕೇಳಿದಾಗ, ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಏಜೆನ್ಸಿ ಮಾಲೀಕರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ, ಅಂತರ್ಜಲ ಅಭಿವೃದ್ಧಿ ಮಂಡಳಿಯಿಂದ ಅನುಮತಿ ಪಡೆಯಲು ಸೂಚಿಸಲಾಗಿದೆ. ಇದುವರೆಗೂ ಕೊರೆಸಿರುವ 155 ಕೊಳವೆಬಾವಿಗಳು ನೋಂದಣಿಯಾಗಿವೆ ಎಂದರು. ದಂಡ ವಿಧಿಸಿದರೆ ಸಾಲದು, ತಪ್ಪಿತಸ್ಥರ ವಿರುದ್ಧ ಏಕೆ ಎಫ್​ಐಆರ್ ದಾಖಲು ಮಾಡಿಲ್ಲ ಎಂದು ಡಿಸಿ ಕೇಳಿದಾಗ ಉತ್ತರಿಸಲು ತಡಬಡಿಸಿದರು.

ಅಂತರ್ಜಲ ವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ ಯಾವ ಕ್ರಮ ಜರುಗಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಬೈರಾರೆಡ್ಡಿಯನ್ನು ಕೇಳಿದರು. 5 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಮ್ ನಿರ್ವಿುಸಲಾಗುತ್ತಿದೆ ಎಂದು ಉತ್ತರಿಸಿದಾಗ ಗರಂ ಆದ ಜಿಲ್ಲಾಧಿಕಾರಿಗಳು ಹಣದ ಲೆಕ್ಕ ಚನ್ನಾಗಿ ಕೊಡ್ತೀರಾ, ನನಗೆ ಕಾಮಗಾರಿ ಮಾಹಿತಿ ಬೇಕು, ಎಲ್ಲೆಲ್ಲಿ ಚೆಕ್​ಡ್ಯಾಂ ನಿರ್ವಿುಸಲಾಗುತ್ತದೆ ಮಾಹಿತಿ ನೀಡಿ ಎಂದು ತಾಕೀತು ಮಾಡಿದರು.

ಎಇಇ ಮಾಹಿತಿ ನೀಡಲು ಪರದಾಡಿದಾಗ ಸುಳ್ಳು ಮಾಹಿತಿ ನೀಡಿ ಸಿಕ್ಕಿ ಹಾಕಿಕೊಳ್ಳಬೇಡಿ, ಇನ್ನು 15 ದಿನದೊಳಗೆ ನಿಖರ ಮಾಹಿತಿ ನೀಡಿ ಎಂದು ಸೂಚಿಸಿದರು.

Leave a Reply

Your email address will not be published. Required fields are marked *