Friday, 16th November 2018  

Vijayavani

Breaking News

ಅಂತರಂಗದ ಮೃದಂಗ ನಿನಾದ…

Thursday, 15.03.2018, 3:04 AM       No Comments

ಪರಿಸರವನ್ನು ಇದ್ದಂತೆ ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ. ಈ ನೀರು ಈ ಗಾಳಿ ಈ ನೆಲ ನಮ್ಮದೆಷ್ಟೋ ಅಷ್ಟೇ ನಮ್ಮ ಸಹವಾಸಿಗಳಾದ ಇತರ ಜೀವಿಗಳದ್ದು ಕೂಡ. ಆ ಸತ್ಯವೇ ಆನಂದದ ಮೂಲ. ಆ ಮೂಲವನ್ನು ಹುಡುಕುವ ಸಾಹಸಕ್ಕಿಳಿದು ಬದುಕುವ ಉತ್ಸಾಹವನ್ನು ಜೀವಂತವಾಗಿರಿಸೋಣ.

 ತೋಟದ ಒಳಗೆ ಹೆಜ್ಜೆ ಹಾಕುತ್ತಿದ್ದ ನಾನು ಇನ್ನೊಂದು ಕಡೆಯಲ್ಲಿ ಸ್ಪಿಂಕ್ಲರ್ ಬದಲಿಸಲು ಹೋಗಿದ್ದ ಇವರನ್ನು ಕೂಗಿ ಕರೆದೆ. ನನ್ನ ಸ್ವರದಲ್ಲಿದ್ದ ಆತುರತೆ ಅವರನ್ನು ‘ಏನಾಯಿತು’ ಎಂದು ಹೇಳುತ್ತಲೇ ಓಡಿ ಬರುವಂತೆ ಮಾಡಿತ್ತು. ಗಾಬರಿಯ ಮುಖ ಹೊತ್ತವರ ದೃಷ್ಟಿ ನನ್ನ ಕೈ ತೋರಿದ ಜಾಗದ ಕಡೆಗೆ ತಿರುಗಿತ್ತು. ಮೊಗದಲ್ಲಿ ನಿಧಾನಕ್ಕೆ ನಗುವೊಂದು ಹಸಿರಾಗುತ್ತ ಹೋಯಿತು. ಧಾರಾಳವಾಗಿ ಎಲೆಗಳನ್ನು ಹೊತ್ತು ನಿಂತಿದ್ದ ಗಿಡವೊಂದು ನಾಲ್ಕು ಪುಟ್ಟ ಮೊಗ್ಗುಗಳನ್ನು ಮೂಡಿಸಿತ್ತಲ್ಲಿ. ‘ಓಹ್.. ನೋಡಲ್ಲಿ ಇನ್ನೊಂದು ಗೊಂಚಲು’ ಎಂದು ಬೇರೆ ಕಡೆಗೆ ಬೆಟ್ಟು

ಮಾಡಿದರು. ಅಲ್ಲಿಯವರೆಗೆ ತಲೆಗೆ ಬೀಳುತ್ತಿದ್ದ ಬಿರು ಬಿಸಿಲನ್ನು ಮರೆತೇ ಬಿಟ್ಟವರಂತೆ ಮತ್ತೂ ಹಲವು ಗೊಂಚಲುಗಳನ್ನು ಹಸಿರೆಲೆಗಳ ನಡುವೆ ಹುಡುಕಿದೆವು. ಹಸಿರು ಬಣ್ಣದ ಮಲಯನ್ ಆಪಲ್ ಗಿಡದ ಮೊಗ್ಗಾಗಿತ್ತದು. ನರ್ಸರಿಯಿಂದ ಹಣ ಕೊಟ್ಟು ತಂದ ಕೆಂಬಣ್ಣದ ಮಲಯನ್ ಆಪಲ್ ನೆಟ್ಟ ಮರುವರ್ಷದಲ್ಲೇ ಮೊಗ್ಗು ಬಿಟ್ಟು ಕಾಯಿ ಕಚ್ಚಿತ್ತು. ಆಗ ಉಂಟಾದ ಆನಂದಕ್ಕಿಂತ ಹೆಚ್ಚಿನದ್ದು ಇಲ್ಲಿ ಮೂಡಲು ಕಾರಣವಿಲ್ಲದೇ ಇಲ್ಲ.

ಸಂಬಂಧಿಕರೊಬ್ಬರ ಸೊಸೆಯ ಸೀಮಂತ ಸಮಾರಂಭದಲ್ಲಿ ಬಂದ ನೆಂಟರಿಷ್ಟರಿಗೆಲ್ಲ ಬುಟ್ಟಿ ಬುಟ್ಟಿ ತುಂಬಿಟ್ಟು ಈ ಹಣ್ಣುಗಳನ್ನು ತಿಂದು ತೇಗುವ ಸೌಲಭ್ಯ ಒದಗಿಸಿದ್ದರು. ರುಚಿಯಾದ ಹಣ್ಣುಗಳು ಹೊಟ್ಟೆಯ ಬಹುಪಾಲು ಆಕ್ರಮಿಸಿ ಆ ದಿನ ಊಟ ಕಡಿಮೆ ಮಾಡುವಂತೆ ಮಾಡಿತ್ತು. ಕಸಿ ಗಿಡದ ಹಣ್ಣುಗಳಿವು ಎಂದು ಅದರ ಬಗ್ಗೆ ತಿಳಿಸಿದ್ದರು. ಹಣ್ಣು ತಿನ್ನುವಾಗ ಕಂಡ ಬೀಜಗಳನ್ನು ತೋರಿಸಿ ಇದರಿಂದ ಗಿಡ ಮಾಡಬಹುದೋ ಎಂದು ಕೇಳಿದ್ದೆ. ಗೊತ್ತಿಲ್ಲ ಎಂದಿದ್ದರು. ನಾನು ಕುತೂಹಲಕ್ಕೆ ಅವುಗಳನ್ನೆಲ್ಲ ನನ್ನ ಪರ್ಸಿಗೆ ತುಂಬಿ ಮನೆಗೆ ತಂದು ಹೂವಿನ ಚಟ್ಟಿಯೊಂದಕ್ಕೆ ಮಣ್ಣು ತುಂಬಿಸಿ ಬೀಜಗಳನ್ನು ಊರಿದ್ದೆ. ತಿಂಗಳಲ್ಲಿ ಮೊಳಕೆಯೊಡೆದು ಹಸಿರೆಲೆಗಳು ಕಾಣಿಸಿಕೊಂಡಿದ್ದವು. ಮೂರು ಗಿಡಗಳು ಗಟ್ಟಿಯಾಗಿ ಮೇಲೆ ಬಂದಿದ್ದವು. ಒಂದಿಷ್ಟು ದೊಡ್ಡದಾದ ಮೇಲೆ ಅದನ್ನು ತೋಟದಲ್ಲಿ ಗುಂಡಿ ಮಾಡಿ ನೆಟ್ಟು ಆಗಿತ್ತು. ಗಿಡ ಚೆನ್ನಾಗಿ ಬಂದರೂ ಕಾಯಿ ಕಚ್ಚುವ ಯಾವ ಲಕ್ಷಣಗಳನ್ನೂ ತೋರಿಸುತ್ತಿರಲಿಲ್ಲ. ಆ ಹಣ್ಣಿನ ಗಿಡಗಳು ಬೇರೆಯವರ ಮನೆಗಳಲ್ಲಿ ಹೂ ಬಿಡುವಾಗ ನಾನೂ ನಮ್ಮ ಗಿಡವನ್ನು ಹಣಕಿ ಇಣುಕಿ ನೋಡಿ ಹ್ಯಾಪು ಮೋರೆ ಹೊತ್ತು ಬರುವುದು ಕಳೆದ ಆರೇಳು ವರ್ಷಗಳಲ್ಲಿ ಮಾಮೂಲು. ‘ನರ್ಸರಿಯಲ್ಲಿ ಸಿಗುತ್ತಲ್ವಾ, ತಂದು ನೆಟ್ಟರೆ ವರ್ಷ ಕಳೆಯುವಾಗ ಕಾಯಿ ಬಿಡುತ್ತದೆ. ಇದನ್ನು ಕಡಿದು ಇದೇ ಜಾಗದಲ್ಲಿ ನೆಡಿ’ ಎಂಬೆಲ್ಲ ಸಲಹೆಗಳಿಗೆ ಕಿವುಡಾದ ಕಾರಣ ಗಿಡ ಸೊಂಪಾಗಿ ಎಲೆಗಳನ್ನಷ್ಟೇ ಹೆಚ್ಚಿಸುತ್ತ ಹೋಗುತ್ತಿತ್ತು. ಗಿಡವೊಂದು ಹಣ್ಣು ಬಿಟ್ಟು ಬೀಜ ಹೊಂದಿದೆ ಎಂದಾದರೆ ಅದು ವಂಶ ಬೆಳೆಸಲು ಎಂಬುದು ಪ್ರಕೃತಿ ಹೇಳಿ ಕೊಟ್ಟ ಪಾಠ. ಅದನ್ನು ಆ ಬೀಜದಿಂದಾದ ಗಿಡವೂ ಪಾಲಿಸಲೇಬೇಕಲ್ಲ. ಅದು ಸುಳ್ಳಾಗುವುದುಂಟೇ ಎಂಬ ನಂಬಿಕೆ ಕೈ ಹಿಡಿದ ಸಾರ್ಥಕ ಕ್ಷಣಗಳು ನಮ್ಮದಾಗಿದ್ದವು. ಎದೆ ತುಂಬಿ ಬಂದ ಸಂತಸವದು.

ಮನೆಯಲ್ಲಿ ಸಮಾರಂಭವಿತ್ತು. ಅಂಗಳದ ಸುತ್ತಲೂ ಕೋಟೆಯ ಕಾವಲಿನವರಂತೆ ಇಟ್ಟಿದ್ದ ಹೂಕುಂಡಗಳು ಕೆಲವು ದಿನದ ಮಟ್ಟಿಗೆ ಹೊರ ಹೋಗಲೇಬೇಕಿತ್ತು. ಹಾಗೆ ಹೋಗುವಾಗ ಒಣಗಿಲು ಮರದ ಬೊಡ್ಡೆಯ ಮೇಲೆ ನೆಟ್ಟಿದ್ದ ಆರ್ಕಿಡ್ ಗಿಡವೊಂದರ ಪುಟ್ಟ ಪಿಳ್ಳೆ ಸಾಗಾಟದ ವೇಳೆಯಲ್ಲಿ ತಾಯಿ ಗಿಡದ ಅಪ್ಪುಗೆಯಿಂದ ತಪ್ಪಿಸಿಕೊಂಡು ಅಂಗಳದ ಬಯಲಿನಲ್ಲಿ ಅನಾಥವಾಗಿ ಮಲಗಿತ್ತು. ಹೇಗೂ ದೊಡ್ಡ ಗಿಡ ಉಂಟಲ್ಲ, ಇದನ್ನೆಸೆದರೆ ಆಯ್ತು ಎಂದು ಕೈಗೆತ್ತಿಕೊಂಡವಳು ಯಾಕೋ ಬೇಡವೆನ್ನಿಸಿ ಅದನ್ನು ಊರಲು ಜಾಗ ಹುಡುಕುತ್ತ ನಡೆದೆ. ಹೆಚ್ಚಾಗಿ ನೀರು ಬೇಡದ ವಾತಾವರಣದ ತೇವಾಂಶವನ್ನು ಹಿಡಿದಿಟ್ಟುಕೊಂಡೇ ಬದುಕುವ ಜಾತಿಯ ಗಿಡವಾದ ಕಾರಣ ಅಂಗಳದ ತುದಿಯ ಮಾವಿನ ಮರದ ಅರೆ ತೆರೆದ ಪೊಟರೆಯೊಂದರಲ್ಲಿ ಅದನ್ನಿಟ್ಟಿದ್ದೆ. ಮರೆತೂಬಿಟ್ಟಿದ್ದೆ. ಮೂರ್ನಾಲ್ಕು ತಿಂಗಳುಗಳುರುಳಿದ್ದವು. ಮಾವಿನ ಮರ ಹೂಬಿಟ್ಟು ಕಾಯಾಗುತ್ತ ಇತ್ತು. ಅದನ್ನು ನೋಡುತ್ತ ನಡೆದವಳ ಕಣ್ಣಿಗೆ ಪಕ್ಕನೆ ರಾಚಿದ್ದು ಕೆಂಬಣ್ಣದ ಆರ್ಕಿಡ್. ಯಾರೂ ಏನೂ ಮಾಡದೇ ಇದ್ದರೂ ತನ್ನ ಪಾಡಿಗೆ ಪ್ರಕೃತಿ ತನ್ನ ಕೆಲಸ ಮಾಡಿತ್ತು. ಲಾಟರಿ ಟಿಕೆಟ್ ತೆಗೆಯದೇ ಇದ್ದರೂ ಬಂಪರ್ ಬಹುಮಾನ ಬಂದ ಸಂಭ್ರಮ ನಮ್ಮ ಪಾಲಿಗೆ.

ಎಲ್ಲ ಕಡೆ ಚಳಿಗಾಲ ತನ್ನ ಚಾದರ ಹಾಸಿ ಪಶು ಪಕ್ಷಿ ಪ್ರಾಣಿಗಳನ್ನು ಗಡಗಡ ನಡುಗುವಂತೆ ಮಾಡುವ ಕಾಲ ಬಂದಾಗ ಹಕ್ಕಿಗಳು ಬೆಚ್ಚಗಿನ ವಾತಾವರಣ ಅರಸಿ ವಲಸೆ ಹೋಗುವುದು ಸಹಜ. ನಾವಿರುವ ದಕ್ಷಿಣ ಕನ್ನಡ ಜಿಲ್ಲೆ ಪ್ರದೇಶ ಕಡಿಮೆ ಚಳಿ ಹೊಂದಿದ ಕಾರಣ ಸಹಜವಾಗಿಯೇ ಚಳಿಗಾಲದಲ್ಲಿ ಎಲೆ ಕಳಚುವ ಮರಗಳ ಸಂಖ್ಯೆಯೂ ಕಡಿಮೆಯೇ. ಬೆಚ್ಚನೆಯ ಸ್ಥಳ ಅರಸಿ ಬರುವ ಹಕ್ಕಿಗಳಿಗೆ ನಮ್ಮೂರ ಹಸಿರುಕ್ಕುವ ಮರಗಳು ಆಕರ್ಷಣೀಯವಾಗಿ ಕಾಣಿಸುವುದರಲ್ಲಿ ಆಶ್ಚರ್ಯವಿಲ್ಲ. ಹತ್ತು ಹಲವು ಹಕ್ಕಿಗಳು ನಮ್ಮ ಕಡೆಗೆ ಹಾರಿ ಬರುತ್ತವೆ. ಒಂದಿಷ್ಟು ದಿನ ನಮ್ಮ ಪರಿಸರದಲ್ಲಿ ಕಾಣಿಸಿಕೊಂಡು ತಮ್ಮ ಕೆಲಸ ಮುಗಿದ ಕೂಡಲೇ ಮಾಯವಾಗುತ್ತವೆ. ಹಾಗೆ ಬರುವ ಹಕ್ಕಿಗಳಲ್ಲಿ ಇಂಡಿಯನ್ ಪಿಟ್ಟ (ನವರಂಗ) ಎಂಬ ಹಕ್ಕಿಯೂ ಒಂದು. ಹೆಚ್ಚಾಗಿ ಡಿಸೆಂಬರ್ ಜನವರಿಯಲ್ಲೇ ಕಾಣಿಸಿಕೊಳ್ಳುವ ಈ ಹಕ್ಕಿ ಈ ವರ್ಷ ಇನ್ನೂ ಕಾಣಿಸಿಲ್ಲ ಯಾಕೆ ಎಂಬ ಚಿಂತೆ ನನ್ನದಾಗಿತ್ತು. ಪರಿಸರದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳು ನಮ್ಮ ಕಣ್ಣಿಗೆ ಕಾಣಿಸದಿದ್ದರೂ ಪ್ರಾಣಿ ಪಕ್ಷಿಗಳು ಅದನ್ನು ಗ್ರಹಿಸುತ್ತವೆ. ಸುರಕ್ಷಿತ ಎಂಬ ಭಾವನೆ ಅವುಗಳಲ್ಲಿ ಮೊಳೆಯುವವರೆಗೂ ಯಾವುದೇ ಜಾಗವನ್ನು ತಮ್ಮದಾಗಿಸಿಕೊಳ್ಳವು. ನಾನು ನಮ್ಮ ಪರಿಸರದಲ್ಲಿ ಈ ಹಕ್ಕಿಯನ್ನು ಗುರುತಿಸಿ ನಾಲ್ಕು ವರ್ಷಗಳಾಗಿತ್ತು.

ಛೇ ಈ ವರ್ಷ ಪಿಟ್ಟ ಕಾಣಲಿಲ್ಲ ಎಂದರೆ ನಮ್ಮ ಪರಿಸರ ಅದಕ್ಕೆ ಬೇಕಾದ ರಕ್ಷಣೆಯನ್ನು ಕೊಡುವಲ್ಲಿ ಸಫಲವಾಗಿಲ್ಲವೇನೋ ಎಂಬ ನೋವಿನೆಳೆ ನನ್ನೊಳಗೆ ಕಾಡತೊಡಗಿತ್ತು.

ಬಸಳೆ ಸೊಪ್ಪಿನ ತಂಬುಳಿ ಆರೋಗ್ಯಕ್ಕೆ ಒಳ್ಳೆಯದು. ಬಿರು ಬೇಸಿಗೆಯಲ್ಲಿ ಶರೀರಕ್ಕೆ ತಂಪು ನೀಡುವಂತದ್ದು ಇವತ್ತು ಅದನ್ನೇ ಮಾಡಬೇಕು ಎಂದು ಅಡುಗೆ ಕೋಣೆಯ ಕಿಟಕಿಯಾಚೆಯಿರುವ ಹಸಿರು ಬಸಳೆ ಚಪ್ಪರದ ಎಲೆಗಳ ಕಡೆ ಕಣ್ಣು ಹಾಯಿಸಿದ್ದೆ ಅಷ್ಟೇ… ಚಪ್ಪರದ ಕಂಬದ ಮೇಲೆ ಕಂಡದ್ದೇ ಈ ನವರಂಗ! ಕಾಡಿಗೆ ಹಚ್ಚಿದಂತಿರುವ ಕಣ್ಣುಗಳನ್ನು ಹೊರಳಿಸುತ್ತ ಚಪ್ಪರದ ಬುಡದ ಕಡೆ ನೋಡುತ್ತಿತ್ತು. ನನ್ನ ಶರೀರದಲ್ಲೆಲ್ಲ ಸಂತಸದ ಅಲೆಗಳು ಭೋರ್ಗರೆದು ಧುಮ್ಮಿಕ್ಕಿದವು. ದೂರ ಹೋದ ಮಕ್ಕಳು ಊರು ಮರೆಯದೇ ನೆನಪಿಟ್ಟುಕೊಂಡು ತಾಯ್ನೆಲಕ್ಕೆ ಮರಳಿದಂತಹ ಅನುಭವ.

ದೂರದ ಉತ್ತರ ಭಾರತದಿಂದ ಸಾವಿರಾರು ಮೈಲುಗಟ್ಟಲೇ ಹಾರಿ ನಮ್ಮ ಮನೆಯ ಬಸಳೆ ಚಪ್ಪರದ ಕೆಳಗಿನ ಹುಳ ಹುಪ್ಪಟೆಗಳನ್ನು ತಿಂದು ಗಟ್ಟಿಯಾಗಿ ಮತ್ತೆ ಮರಳಿ ಹೋಗುವ ಈ ಹಕ್ಕಿಗಳಿಗೆ ಯಾರು ದಾರಿ ತೋರುವವರು ಪ್ರಕೃತಿಯನ್ನುಳಿದು. ಯಾರು ಈ ಆನಂದದ ಕ್ಷಣಗಳನ್ನು ನಮಗಾಗಿ ನೀಡುವರು ಈ ನಿಸರ್ಗವನ್ನು ಬಿಟ್ಟು..!!

ಒಮ್ಮೆ ಸಂತಸ ಮತ್ತು ದುಃಖಗಳು ಅಡಗುವಾಟ ಆಡೋಣ ಎಂದುಕೊಂಡವಂತೆ. ಯಾರು ತಮ್ಮನ್ನು ಹುಡುಕುತ್ತಾರೋ ನೋಡೋಣ ಎಂದುಕೊಂಡು ಎರಡು ಅಡಗುದಾಣಗಳನ್ನು ಅರಸುತ್ತ ಹೊರಟವು. ಒಂದಿಷ್ಟು ಅಲೆದಾಟದ ಬಳಿಕ ದುಃಖ ಬೇಸರಗೊಂಡು ಇನ್ಯಾರು ಅಲೆದಾಡಿ ಬಳಲುತ್ತಾರೆ ಎಂದುಕೊಂಡು ಹೊರಬಾಗಿಲ ಸಂದಿನಲ್ಲಿ ಅಡಗಿ ನಿಂತಿತಂತೆ. ಬಾಗಿಲು

ಮುಚ್ಚುವಾಗ ತೆರೆಯುವಾಗ ಪ್ರಕಟಗೊಳ್ಳುವ ದುಃಖವನ್ನು ಜನರೆಲ್ಲ ಗುರುತು ಹಿಡಿದರಂತೆ. ಸಂತಸ ಇದನ್ನು ಕಂಡು ನಾನು ಸ್ವಲ್ಪ ಒಳಗೆ ಅಡಗುತ್ತೇನೆ ಎಂದುಕೊಂಡು ಮನದೊಳಗೆ ಅಡಗಿಕುಳಿತಿತಂತೆ. ಜನರೆಲ್ಲ ಸಂತಸಕ್ಕಾಗಿ ಹುಡುಕುತ್ತ ಬಾಗಿಲ ಬಳಿಯಲ್ಲಿ ಕಾಣ ಸಿಗುವ ದುಃಖವನ್ನು ಕಂಡು ನಿರಾಶರಾಗುತ್ತಿದ್ದರೇ ವಿನಃ ಒಳಗಿಣುಕಿ ನೋಡಿ ತಮ್ಮ ಸಂತಸವನ್ನು ಹೊರಗೆಳೆಯುವ ಪ್ರಯತ್ನ ಮಾಡಲೇ ಇಲ್ಲ. ಇದರಿಂದಾಗಿಯೇ ಜೀವನದ ಸಣ್ಣ ಸಣ್ಣ ವಿಷಯಗಳಲ್ಲೂ ನಾವು ದುಃಖವನ್ನು ಮೊದಲು ಕಾಣುತ್ತೇವೆ. ನಿರಾಸೆಯನ್ನು ಮೊದಲು ಅನುಭವಿಸುತ್ತೇವೆ. ಅದೇ ಒಳಗಿರುವ ಸಂತಸವನ್ನು ಕಾಣುವ ಪುಟ್ಟ ಪ್ರಯತ್ನವನ್ನು ಮಾಡುವುದಿಲ್ಲ.

ಒಂದಿಷ್ಟು ನಮ್ಮೊಳಗಿಣುಕೋಣ. ದಿನ ನಿತ್ಯ ನಡೆಯುವ ಇಂತಹ ಸಣ್ಣಪುಟ್ಟ ಘಟನೆಗಳು ಜೀವನಕ್ಕೆ ಬೇಕಾದ ಪಾಠವನ್ನು ಹೇಳುತ್ತವೆ. ತಾಳ್ಮೆಯನ್ನು ಪರೀಕ್ಷಿಸುತ್ತವೆ. ಬಸವಳಿದರೂ ಸೋತೆ ಎಂದು ಹೆಜ್ಜೆ ಹಿಂದಿಡದಿರುವುದು ಕೂಡ ಗೆಲುವೇ. ಆ ಸಂತೃಪ್ತಿಯನ್ನು ನೀಡುವುದು ನಮ್ಮನ್ನು ಕಾಯುವ ಪ್ರಕೃತಿ. ಅಂತಹ ಸಂತಸ ನಮ್ಮದಾದಂತೆ ಪರರದೂ ಆಗಬೇಕೆಂಬಾಸೆಯಲ್ಲಿ ಪರಿಸರವನ್ನು ಇದ್ದಂತೆ ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ. ಈ ನೀರು ಈ ಗಾಳಿ ಈ ನೆಲ ನಮ್ಮದೆಷ್ಟೋ ಅಷ್ಟೇ ನಮ್ಮ ಸಹವಾಸಿಗಳಾದ ಇತರ ಜೀವಿಗಳದ್ದು ಕೂಡ. ಆ ಸತ್ಯವೇ ಆನಂದದ ಮೂಲ. ಆ ಮೂಲವನ್ನು ಹುಡುಕುವ ಸಾಹಸಕ್ಕಿಳಿದು ಬದುಕುವ ಉತ್ಸಾಹವನ್ನು ಜೀವಂತವಾಗಿರಿಸೋಣ. ನಮ್ಮ ನಂತರದವರಿಗೂ ಭೂಮಿಯನ್ನು ಸಹ್ಯವಾಗಿಸೋಣ.

(ಲೇಖಕರು ಸಾಹಿತಿ)

Leave a Reply

Your email address will not be published. Required fields are marked *

Back To Top