ಅಂಗವಿಕಲೆಗೆ ಉದ್ಯೋಗ

ಬೆಂಗಳೂರು: ಗುಂಡ್ಲುಪೇಟೆಯ ಅಂಗವಿಕಲ ಮಹಿಳೆಗೆ ಸಿಎಂ ಕಚೇರಿಯಲ್ಲೇ ಉದ್ಯೋಗ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇದೀಗ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದು, ಮತ್ತೋರ್ವ ಅಂಗವಿಕಲ ಮಹಿಳೆಗೆ ಅನ್ನದ ದಾರಿ ತೋರಿಸಿದ್ದಾರೆ.

ಎರಡು ತಿಂಗಳ ಹಸುಗೂಸಿನ ಜತೆ ವೃದ್ಧೆ ತಾಯಿಯೊಂದಿಗೆ ಸಿಎಂ ನಿವಾಸದ ಮುಂದೆ ನಿಂತಿದ್ದ ದಾವಣಗೆರೆಯ ಶೈಲಾ ಎಂಬ ಮಹಿಳೆಯ ಅಳಲಿಗೆ ಮಮ್ಮಲ ಮರುಗಿದ ಎಚ್ಡಿಕೆ ದಾವಣಗೆರೆಯ ಜಿಲ್ಲಾ ವಾರ್ತಾ ಇಲಾಖೆ ಯಲ್ಲಿ ಟೈಪಿಸ್ಟ್ ಕೆಲಸ ಕೊಡಿಸುವಂತೆ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ್​ಗೆ ಸೂಚನೆ ನೀಡಿದರು.

ದಾವಣಗೆರೆ ನಿವಾಸಿ ಶೈಲಾ ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದು, ಎಡಗೈಯಲ್ಲಿ ಕಂಪ್ಯೂಟರ್ ಟೈಪಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಶೈಲಾ ಕೈ ಕಳೆದುಕೊಂಡ ಮೇಲೆ ಗಂಡ ಕೂಡ ಬಿಟ್ಟು ಹೋಗಿದ್ದಾನೆ. ಎರಡು ತಿಂಗಳ ಮಗು ಹಾಗೂ ಮೊದಲ ಪುತ್ರನ ಪಾಲನೆ ಜತೆಗೆ ತಾಯಿಯ ಜೀವನ ನಿರ್ವಹಣೆ ಜವಾಬ್ದಾರಿ ಶೈಲಾ ಅವರ ಮೇಲಿದೆ. ಈಕೆ ಕೆಲಸಕ್ಕಾಗಿ ಹಲವೆಡೆ ಅಲೆದರೂ ಉದ್ಯೋಗ ಸಿಗದೆ ಕಂಗಾಲಾಗಿ ಕೊನೆಗೆ ಮುಖ್ಯಮಂತ್ರಿಗೆ ಮೊರೆಯಿಡಲು ಬೆಂಗಳೂರಿಗೆ ಬಂದಿದ್ದರು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಈಕೆಯ ಹಸುಗೂಸನ್ನು ಕುಮಾರಸ್ವಾಮಿ ಎತ್ತಿ ಮುದ್ದಾಡಿದರು.

ಮಾನವೀಯತೆ ದೃಷ್ಟಿಯಿಂದ ಕೆಲಸ ಕೊಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು. ಕೆಲಸ ಕೊಡುವ ಭರವಸೆ ನೀಡಿದಾಗ ಶೈಲಾ, ‘ನನಗೆ ಬೆಂಗಳೂರಿ ನಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ದಾವಣಗೆರೆಯಲ್ಲಿ ಕೊಡಿಸಿ’ ಎಂದು ಕೋರಿದರು. ಆಗ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎಚ್.ಬಿ ದಿನೇಶ್ ದಾವಣಗೆರೆಯ ವಾರ್ತಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವುದಾಗಿ ಹೇಳಿದರು.

ಮೈಗಳ್ಳ ಸಿಬ್ಬಂದಿ ತೆಗೆಯಲು ಸೂಚನೆ

ಮುಖ್ಯಮಂತ್ರಿ ಕಚೇರಿಯಲ್ಲಿ 270 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಹಲವರಿದ್ದಾರೆ. ಆ ಪೈಕಿ ಕೆಲವರು ಮೈಗಳ್ಳರಾಗಿದ್ದು, ಕಾರಿಡಾರ್​ನಲ್ಲಿ ತಿರುಗಾಡುತ್ತಿರುತ್ತಾರೆ ಅಂಥವರನ್ನು ತೆಗೆದುಹಾಕಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.

Leave a Reply

Your email address will not be published. Required fields are marked *