ಅಂಗನವಾಡಿ ಮಕ್ಕಳಿಗೆ ಬದಲಿ ವ್ಯವಸ್ಥೆ

ಲಕ್ಷ್ಮೇಶ್ವರ: ಅಂಗನವಾಡಿ ಕಟ್ಟಡದ ಮೇಲ್ಪದರ ಕುಸಿದ ಘಟನೆಯಿಂದ ಎಚ್ಚೆತ್ತುಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬಾಲೆಹೊಸೂರಿಗೆ ಭೇಟಿ ನೀಡಿ ತಾತ್ಕಾಲಿಕವಾಗಿ ಅಂಗನವಾಡಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.

ಗುರುವಾರ ಐವರು ಮಕ್ಕಳು ಗಾಯಗೊಂಡ ಘಟನೆಯಿಂದ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿರಲಿಲ್ಲ. ಆದರೆ, ಅಂಗನವಾಡಿ ಸಿಬ್ಬಂದಿ ಮನೆಮನೆಗೆ ತೆರಳಿ ಪಾಲಕರಿಗೆ ಧೈರ್ಯ ಹೇಳಿ ಮಕ್ಕಳನ್ನು ಕರೆ ತಂದು ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪಾಠ ಮಾಡಲಾಯಿತು. ತೀವ್ರ ಗಾಯಗೊಂಡಿರುವ ಪುಟಾಣಿಗಳಾದ ವಿಜಯಲಕ್ಷ್ಮೀ ಪುಟ್ಟಮ್ಮನವರ ಹಾಗೂ ದೀಪಾ ಹುಲ್ಲೂರ ಇನ್ನೂ ಜಿಲ್ಲಾಸ್ಪತ್ರೆಯಲ್ಲಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಪಡಗಣ್ಣವರ ಮತ್ತು ಸಿಡಿಪಿಒ ಅವಿನಾಶ ಗೋಡಖಿಂಡಿ ಮಾಹಿತಿ ನೀಡಿ, ಈಗಿರುವ ಕಟ್ಟಡ ದುರಸ್ತಿಗಾಗಿ 50 ಸಾವಿರ ರೂ. ಅನುದಾನ ಮಂಜೂರಾಗಿದೆ. ದುರಸ್ತಿ ಕಾರ್ಯ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ದುರ್ಘಟನೆ ಸಂಭವಿಸಿದೆ. ತಾತ್ಕಾಲಿಕವಾಗಿ ರಾಜೀವ್ ಗಾಂಧಿ ಯುವಕ ಸಂಘದ ಕಟ್ಟಡ ಇಲ್ಲವೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಸಲು ರ್ಚಚಿಸಲಾಗಿದೆ. ಈಗಿರುವ ಕಟ್ಟಡ ದುರಸ್ತಿಗೆ ಯೋಗ್ಯವೋ ಇಲ್ಲವೋ, ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ವಿುಸಬೇಕೋ ಬೇಡವೋ ಎಂಬುದರ ಕುರಿತು ಇಂಜಿನಿಯರ್ ಮತ್ತು ಹಿರಿಯ ಅಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹೊಸ ಕಟ್ಟಡ ನಿರ್ವಿುಸಲು ಒತ್ತಾಯ: 2000ರಲ್ಲಿ ನಿರ್ವಣಗೊಂಡ ಈಗಿನ ಕಟ್ಟಡ ಅಲ್ಲಲ್ಲಿ ಕಳಚಿ ಬೀಳುತ್ತಿದೆ. ಈಗ ಅಂಗನವಾಡಿ ನಡೆಸುವ ದೇವಸ್ಥಾನವೂ ಸುಭದ್ರವಾಗಿಲ್ಲ. ಆದ್ದರಿಂದ ಆದಷ್ಟು ಬೇಗ ಹೊಸ ಕಟ್ಟಡ ನಿರ್ವಿುಸಬೇಕು. ಇದೀಗ ಅರ್ಧಕ್ಕೆ ನಿಂತಿರುವ ಗ್ರಾಮದಲ್ಲಿನ ಬ್ರಹ್ಮದೇವರ ಸಮುದಾಯ ಭವನ ಪೂರ್ಣಗೊಳಿಸಿ ತಾತ್ಕಾಲಿಕವಾಗಿ ಅಲ್ಲಿ ಅಂಗನವಾಡಿ ನಡೆಸಬೇಕು. ಅಲ್ಲದೆ, ಘಟನೆಯಲ್ಲಿ ಗಾಯಗೊಂಡಿರುವ ಮಕ್ಕಳ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.