ಅಂಗನವಾಡಿ ಆಹಾರ ಸಾಮಗ್ರಿ ಕಳವು!

ನರಗುಂದ: ತಾಲೂಕಿನ ಬನಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದ ಬೀಗ ಒಡೆದ ಕಳ್ಳರು ಮಕ್ಕಳಿಗೆ ಪೂರೈಸಲಾಗುವ ಆಹಾರ ಸಾಮಗ್ರಿ ಮತ್ತು ಅಡುಗೆ ಪಾತ್ರೆಗಳನ್ನು ತೆಗೆದುಕೊಂಡು ಪರಾರಿಯಾಗಿದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

ಬನಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿದ್ದ ನಾಲ್ಕು ಪೆಂಟಿ ಬೆಲ್ಲ, 10 ಕೆಜಿ ಅಕ್ಕಿ, 25 ಕೆಜಿ ಹೆಸರು, 10 ಕೆಜಿ ಸಕ್ಕರೆ, 10 ಪ್ಯಾಕೆಟ್ ಹಾಲಿನ ಪುಡಿ, ಕುಕ್ಕರ್, 3 ಕೆಜಿ ತೊಗರಿಬೇಳೆ ಹಾಗೂ ಅಡುಗೆ ತಯಾರಿಕೆಯ ಅಲ್ಯೂಮಿನಿಯಂ ಪಾತ್ರೆಗಳು ಸೇರಿ ಖಾಲಿ ಚೀಲಗಳು ಕಳವಾಗಿವೆ. ಅಂದಾಜು 13 ಸಾವಿರ ರೂ. ಆಹಾರ ಸಾಮಗ್ರಿ ಕಳ್ಳತನವಾಗಿದೆ.

ಸೆ. 27ರಂದು ಬೆಳಗ್ಗೆ 10ರ ಸುಮಾರಿಗೆ ಅಂಗನಗವಾಡಿ ಸಹಾಯಕಿ ರೇಣವ್ವ ಮಡಿವಾಳರ ಕೇಂದ್ರಕ್ಕೆ ಬಂದಾಗ ಕಳ್ಳತನವಾಗಿದ್ದು ಗೊತ್ತಾಗಿದೆ. ಗ್ರಾಮಸ್ಥರಿಗೆ ತಿಳಿಸಿದಾಗ ಗ್ರಾಪಂ ಪಿಡಿಒ ಯು.ಆರ್. ರಾಯನಗೌಡ್ರ, ಸದಸ್ಯರು ಅಂಗನವಾಡಿಯಲ್ಲಿ ಪರಿಶೀಲಿಸಿದ್ದಾರೆ. ಪಟ್ಟಣದ ತಾಪಂನಲ್ಲಿ ಬಾಲವಿಕಾಸ ಯೋಜನೆಯ ಸೆಟ್​ಲೈಟ್ ಕಾರ್ಯಕ್ರಮದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಬಸಮ್ಮ ಕೊಡ್ಲಿವಾಡ ಅವರಿಗೆ ಬೆಳಗ್ಗೆ 11ಕ್ಕೆ ಸಾಮಗ್ರಿ ಕಳವಾದ ಕುರಿತು ಮಾಹಿತಿ ಲಭ್ಯವಾಗಿದೆ. ಆಗ ಅವರು ಕಾರ್ಯಕ್ರಮದಲ್ಲಿದ್ದ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಸವಿತಾ ಮುನವಳ್ಳಿ ಅವರಿಗೆ ತಿಳಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸಿಪಿಐ ಶ್ರೀನಿವಾಸ ಮೇಟಿ ತನಿಖೆ ಕೈಗೊಂಡಿದ್ದಾರೆ.