ಅಂಗನವಾಡಿ ಆಹಾರದಲ್ಲಿ ಅವ್ಯವಹಾರ ಶಂಕೆ

ಹುಬ್ಬಳ್ಳಿ: ನವಲಗುಂದ ತಾಲೂಕಿನ 220 ಅಂಗನವಾಡಿಗಳಿಗಾಗಿ ಪೂರೈಕೆಯಾಗಿರುವ ಪೌಷ್ಟಿಕ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದರಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ.

ಮಕ್ಕಳು ಮತ್ತು ಗರ್ಭಿಣಿಯರಿಗೆ ಅತ್ಯುತ್ತಮ ಗುಣಮಟ್ಟದ ಆಹಾರ ಪೂರೈಸಲು ಸರ್ಕಾರ ಅತಿ ಹೆಚ್ಚು ದರ ನಿಗದಿಪಡಿಸಿದೆ. ಆದರೆ, ಪೂರೈಕೆಯಾಗಿರುವ ಆಹಾರ ಧಾನ್ಯಗಳು ಆ ದರಕ್ಕೆ ತಕ್ಕಂತೆ ಇಲ್ಲ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿಗೇ ಪತ್ರ ಬರೆದು, ಆಹಾರದ ಗುಣಮಟ್ಟ ಪರೀಕ್ಷೆ ನಡೆಸಲು ಒತ್ತಾಯಿಸಿದ್ದಾರೆ.

ನವಲಗುಂದ ತಾಲೂಕು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮ ಅಧಿಕಾರಿ (ಸಿಡಿಪಿಒ) ಅಣ್ಣಿಗೇರಿಯ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರ(ಎಂಎಸ್​ಪಿಟಿಸಿ)ದಿಂದ ಸಾಮಗ್ರಿ ಖರೀದಿಸುತ್ತಾರೆ. ಈ ಕೇಂದ್ರದವರು ಖಾಸಗಿಯವರಿಂದ ಕಡಿಮೆ ಗುಣಮಟ್ಟದ ಸಾಮಗ್ರಿ ಖರೀದಿಸಿ ಪೂರೈಸಿ, ಸರ್ಕಾರ ನಿಗದಿಪಡಿಸಿದ ಗರಿಷ್ಠ ದರ ಪಡೆದುಕೊಳ್ಳುತ್ತಿದ್ದಾರೆ.

ಪರೀಕ್ಷೆಯಲ್ಲಿ ಮೋಸ?: ಸಾಮಗ್ರಿಯನ್ನು ಆಹಾರ ವಸ್ತು ಪ್ರಯೋಗಾಲಯದವರಿಂದ ಪರೀಕ್ಷಿಸಿ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಇಲ್ಲಿ, ಉತ್ತಮ ಮಾದರಿಯ ಸ್ಯಾಂಪಲ್​ಅನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪ್ರಮಾಣಪತ್ರ ಪಡೆದು, ನಂತರ ಕಳಪೆ ಗುಣಮಟ್ಟದ್ದನ್ನು ಸರಬರಾಜು ಮಾಡಲಾಗುತ್ತಿದೆ ಎಂಬ ಅನುಮಾನವಿದೆ. ದೂರು ಬಂದರೆ, ಅವ್ಯವಹಾರ ಮಾಡಿದವರನ್ನು ಪ್ರಯೋಗಾಲಯ ಪ್ರಮಾಣಪತ್ರವೇ ಬಚಾವು ಮಾಡುತ್ತದೆ.

ಜನರಿಗೆ ಗೊತ್ತಾಗುವುದಿಲ್ಲ: ಈ ಸಲ ಪೂರೈಸಿದಂಥದ್ದೇ ಆಹಾರ ವಸ್ತು ಪ್ರತಿ ಸಲವೂ ಫಲಾನುಭವಿಗಳಿಗೆ ದೊರೆಯುತ್ತದೆ. ಆದರೆ, ಸಾಮಾನ್ಯ ಕಿರಾಣಿ ಅಂಗಡಿಯಲ್ಲಿರುವಂಥದ್ದೇ ವಸ್ತುವಾಗಿರುವುದರಿಂದ ಫಲಾನುಭವಿಗಳಿಗೆ ಸಂಶಯ ಬರುವುದು ಕಡಿಮೆ. ಮೇಲಾಗಿ ಉಚಿತವಾಗಿ ಸಿಗುವುದರಿಂದ ಹೆಚ್ಚು ವಿಮರ್ಶೆಗೆ ಹೋಗುವುದಿಲ್ಲ. ಆದರೆ, ಸರ್ಕಾರ ನಿಗದಿ ಮಾಡಿರುವ ದರದ ಪ್ರಕಾರ- ಸಾಮಾನ್ಯ ಕಿರಾಣಿ ಅಂಗಡಿಯಲ್ಲಿ ಸಿಗುವ ಉತ್ಪನ್ನಕ್ಕಿಂತ ಬಹಳ ಉತ್ತಮ ಆಹಾರ ವಸ್ತುಗಳೇ ಪೂರೈಕೆಯಾಗಬೇಕು. ಕೆಲವು ಜನರು ಸರ್ಕಾರದ ದರಪಟ್ಟಿ ಪಡೆದುಕೊಂಡು ಸಾಮಗ್ರಿಗೆ ಹೋಲಿಸಿದಾಗ ಅನುಮಾನ ಬಂದಿದ್ದರಿಂದ ಶಾಸಕರವರೆಗೆ ದೂರು ಹೋಗಿದೆ.

ದರ ಹೇಗಿದೆ ಗೊತ್ತೆ?: ಸರ್ಕಾರ ನಿಗದಿ ಮಾಡಿರುವ ದರ (ಪ್ರತಿ ಕಿಲೋಕ್ಕೆ) ಈ ಮುಂದಿನಂತಿದೆ. ಸಕ್ಕರೆ-52, ಹೆಸರುಕಾಳು-102, ಶೇಂಗಾ- 105, ಬೆಲ್ಲ- 52, ತೊಗರಿಬೇಳೆ-70, ಅರಿಷಿಣ ಪುಡಿ- 140, ಸಾಂಬಾರು ಪದಾರ್ಥ- 190. ಖಾಸಗಿಯವರು ಎಂಎಸ್​ಪಿಟಿಸಿಗೆ ಪೂರೈಸುವ ದರ ಹೀಗಿದೆ: ಸಕ್ಕರೆ- 38, ಹೆಸರುಕಾಳು-75, ಶೇಂಗಾ- 68, ಬೆಲ್ಲ- 38, ತೊಗರಿಬೇಳೆ- 62, ಅರಿಷಿಣ ಪುಡಿ- 110, ಸಾಂಬಾರು ಪದಾರ್ಥ- 140. ಪ್ರತಿ ತಿಂಗಳೂ ಹಲವು ಸಾವಿರ ಕ್ವಿಂಟಾಲ್ ಆಹಾರ ಧಾನ್ಯ ಪೂರೈಸುವ ಎಂಎಸ್​ಪಿಟಿಸಿ ಈ ಮೇಲಿನ ಬಾರಿ ವ್ಯತ್ಯಾಸದ ದರದಿಂದಾಗಿ ಹಲವು ಲಕ್ಷ ರೂ. ಲಾಭ ಮಾಡಿಕೊಳ್ಳುತ್ತದೆ. ಅವರಿಗೆ ಸಿಡಿಪಿಒ ಮತ್ತು ತಾ.ಪಂ. ಇಒ ಬಿಲ್ ಪಾಸ್ ಮಾಡುತ್ತಾರೆ. ಅವ್ಯವಹಾರದ ವಾಸನೆ ಬಡಿಯುವುದು ಇಲ್ಲಿಯೇ.

ಹಲವು ಕಡೆ ಹೀಗೆ?: ರಾಜ್ಯದ ಹಲವು ತಾಲೂಕುಗಳಲ್ಲಿ ‘ಪೌಷ್ಟಿಕ ಆಹಾರ’ ಖರೀದಿಯಲ್ಲಿ ಸರ್ಕಾರ ನಿಗದಿಪಡಿಸಿದ ಗುಣಮಟ್ಟ ಇರುವುದಿಲ್ಲ ಎಂಬ ಅನುಮಾನವಿದೆ. ಆದರೆ, ಸರ್ಕಾರ ನಿಗದಿಪಡಿಸಿದ ದರ ಮಾತ್ರ ಪಾವತಿಯಾಗುತ್ತದೆ. ರಾಜಕೀಯ ಪ್ರಭಾವ ಹೊಂದಿರುವ ಕೆಲ ವ್ಯಾಪಾರೋದ್ಯಮಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಥವಾ ಆಮಿಷ ಒಡ್ಡಿ, ತಮ್ಮಿಂದಲೇ ಆಹಾರ ಸಾಮಗ್ರಿ ಖರೀದಿಸುವಂತೆ ಎಂಎಸ್​ಪಿಟಿಸಿಗೆ ಹೇಳಿಸುತ್ತಾರೆ.

ಶಾಸಕರ ಬಿಗಿ ಕ್ರಮ: ಸಾರ್ವಜನಿಕರ ದೂರಿನ ಮೇರೆಗೆ ಶಾಸಕ ಮುನೇನಕೊಪ್ಪ ಅವರು ನವಲಗುಂದ ಗೋಡೌನ್​ನಿಂದ ಆಹಾರ ವಸ್ತುಗಳ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಗುಣಮಟ್ಟದ ಬಗ್ಗೆ ಸಂಶಯ ಬಂದಿದೆ. ಆದ್ದರಿಂದ ಬೆಳಗಾವಿಯ ಆಹಾರ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದವರಿಂದ ಸಾರ್ವಜನಿಕರ ಸಮಕ್ಷಮದಲ್ಲಿ ಗೋಡೌನ್​ದಲ್ಲೇ ಪರೀಕ್ಷೆ ನಡೆಯಬೇಕು. ಮಕ್ಕಳು ಮತ್ತು ಗರ್ಭಿಣಿಯರಿಗೆ ಕೊಡುವ ಆಹಾರದ ವಿಷಯದಲ್ಲಿ ಯಾವುದೇ ರಾಜಿ ಸಲ್ಲದು. ಸರ್ಕಾರ ನೀಡುವ ದರಕ್ಕೆ ತಕ್ಕಂತೆ ಗುಣಮಟ್ಟ ಇದೆ ಎಂದು ವರದಿ ಬಂದರೆ ಮಾತ್ರ ಫಲಾನುಭವಿಗಳಿಗೆ ಪೂರೈಕೆ ಮಾಡಿ; ಇಲ್ಲದಿದ್ದರೆ ಮಾಲನ್ನು ವಶಕ್ಕೆ ಪಡೆದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದೇನೆ. ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಸಚಿವೆ ಜಯಮಾಲಾ ಅವರ ಗಮನಕ್ಕೂ ತರಲಾಗುವುದು ಎಂದಿದ್ದಾರೆ. ಶಾಸಕರ ಬಿಗಿ ಕ್ರಮದಿಂದ ಸದ್ಯಕ್ಕೆ ಸರ್ಕಾರಿ ‘ಪೌಷ್ಟಿಕ ಆಹಾರ’ ವಿತರಣೆ ಸ್ಥಗಿತಗೊಳಿಸಲಾಗಿದೆ.

ಸಿಸಿ ಕ್ಯಾಮರಾ ಕಾವಲು: ಗುಣಮಟ್ಟಕ್ಕೆ ಸಂಬಂಧಿಸಿದ ಸಂಗತಿ ಶಾಸಕರ ಗಮನಕ್ಕೆ ಬಂದಿದೆ ಎಂದು ಗೊತ್ತಾದೊಡನೆ ನವಲಗುಂದದ ಗೋದಾಮಿನಲ್ಲಿ ಸಂಗ್ರಹಿಸಿದ್ದ ಆಹಾರ ವಸ್ತುವನ್ನು ಬೇರೆ ಕಡೆ ಸಾಗಿಸಲು ಕೆಲವರು ಪ್ರಯತ್ನಿಸಿದ್ದರು. ಇದನ್ನು ತಿಳಿದ ಶಾಸಕರು ಅಧಿಕಾರಿಗಳೊಂದಿಗೆ ಮಾತನಾಡಿ, ಗೋದಾಮಿಗೆ ಬೀಗ ಹಾಕಿಸಿದ್ದಾರೆ. ಅಲ್ಲದೆ, ಗೋದಾಮಿನ ಎದುರು ಸಿಸಿ ಕ್ಯಾಮರಾ ಕೂಡ ಹಾಕಿಸಿದ್ದಾರೆ.

ಶಾಸಕರ ದೂರಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಸ್ವತಃ ಜಿಲ್ಲಾಧಿಕಾರಿಯವರೇ ಸೂಚಿಸಿದ್ದಾರೆ. ಅದರಂತೆ, ಆಹಾರ ವಸ್ತುಗಳ ಪ್ರಯೋಗಾಲಯ ಪರೀಕ್ಷೆ ಮಾಡಿಸುವಂತೆ ನವಲಗುಂದ ಸಿಡಿಪಿಒಗೆ ಸೂಚಿಸಿದ್ದೇನೆ. ಪರೀಕ್ಷೆಯ ವರದಿ ನೋಡಿ ಮುಂದಿನ ಕ್ರಮ ಕೈಗೊಳ್ಳಲು ಸಹ ತಿಳಿಸಲಾಗಿದೆ. – ಬಸವರಾಜ ವರವಟ್ಟಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ, ಧಾರವಾಡ