ಅಂಗನವಾಡಿಯ ಐವರು ಮಕ್ಕಳಿಗೆ ಗಾಯ

ಲಕ್ಷ್ಮೇಶ್ವರ: ಹಳೆಯದಾದ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕಳಚಿ ಬಿದ್ದ ಪರಿಣಾಮ ಐವರು ಮಕ್ಕಳು ಗಾಯಗೊಂಡ ಘಟನೆ ತಾಲೂಕಿನ ಬಾಲೇಹೊಸೂರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಮೂವರಿಗೆ ಗಂಭೀರ ಹಾಗೂ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯಲಕ್ಷ್ಮೀ ಗುಡ್ಡಪ್ಪ ಪುಟ್ಟಮ್ಮನವರ(5) ಎಂಬ ಬಾಲಕಿಯ ಕಾಲಿನ ತೊಡೆ ಭಾಗದ ಎಲುಬು ಮುರಿದಿದೆ. ದೀಪಾ ಮೌನೇಶ ಹುಲ್ಲೂರ (4) ಎಂಬ ಬಾಲಕಿಯ ತಲೆಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸುಶ್ಮಿತಾ ಮತ್ತೂರ (4) ತಲೆಗೆ ಗಾಯವಾಗಿದ್ದು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾವ್ಯಾ ಹೊನಕೇರಪ್ಪ ಪುಟ್ಟಮ್ಮನವರ ಮತ್ತು ಸಂಗೀತ ಪುಟ್ಟಮ್ಮನವರ ಎಂಬ ಬಾಲಕಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮದ ವಾರ್ಡ್ 2ರಲ್ಲಿ 20 ವರ್ಷಗಳಷ್ಟು ಹಳೆಯದಾದ ಅಂಗನವಾಡಿ ಕೇಂದ್ರ ಸಂಖ್ಯೆ 153ರಲ್ಲಿ ಒಟ್ಟು 36 ಮಕ್ಕಳು ಓದುತ್ತಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೇಲ್ಛಾವಣಿ ಕಳಚಿಬಿದ್ದಿದೆ. ಆದರೆ, ಗುರುವಾರ ಮೈಲಾರ ಜಾತ್ರೆಗೆ ಮಕ್ಕಳು ತೆರಳಿದ್ದರಿಂದ ಹಾಜರಾತಿ ಅರ್ಧದಷ್ಟಿತ್ತು. ಇದರಿಂದಾಗಿ ಹೆಚ್ಚಿನ ಅವಘಡ ಸಂಭವಿಸಿಲ್ಲ. ದೇವಸ್ಥಾನದಲ್ಲಿ ನಡೆಯುತ್ತಿದ್ದ ಅಂಗನವಾಡಿಯನ್ನು ಒಂದು ವರ್ಷದ ಹಿಂದಷ್ಟೇ ಮತ್ತೆ ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.

ಅಧಿಕಾರಿಗಳ ಭೇಟಿ: ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕುಸಿದು ಮಕ್ಕಳು ಗಾಯಗೊಂಡ ಸುದ್ದಿ ತಿಳಿದು ಸ್ಥಳಕ್ಕೆ ತಹಸೀಲ್ದಾರ್ ಭ್ರಮರಾಂಬಾ ಗುಬ್ಬಿಶೆಟ್ಟಿ, ತಾಪ ಇಒ ಆರ್.ವೈ. ಗುರಿಕಾರ ಹಾಗೂ ಸಿಡಿಪಿಒ ಅವಿನಾಶ ಗೋಡಖಿಂಡಿ ಭೇಟಿ ನೀಡಿ ಪರಿಶೀಲಿಸಿದರು.

‘ಅಂಗನವಾಡಿ ದುರಸ್ತಿ ಕುರಿತು ಗ್ರಾಪಂನಿಂದ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ’ ಎಂದು ಗ್ರಾಮಸ್ಥರು ಸಿಡಿಪಿಒ ಅವರನ್ನು ತರಾಟೆಗೆ ತೆಗೆದುಕೊಂಡರು.

ತಹಸೀಲ್ದಾರ್ ಮಾತನಾಡಿ, ಅಂಗನವಾಡಿ ಮೇಲ್ಛಾವಣಿಯ ಒಂದು ಭಾಗ ಬಿದ್ದಾಗಲೇ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ, ಇನ್ನು ಮುಂದೆ ಶಿಥಿಲ ಕಟ್ಟಡದಲ್ಲಿ ಅಂಗನವಾಡಿ ನಡೆಸಬಾರದು. ಇಂತಹ ಕಟ್ಟಡಗಳನ್ನು ಗುರುತಿಸಿ ದುರಸ್ತಿಗೆ ಸಂಬಂಧಿಸಿದ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಘಟನೆ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಹಸೀಲ್ದಾರರು ಸ್ಪಷ್ಟಪಡಿಸಿದರು.

ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯರು ಲಭಿಸುತ್ತಿಲ್ಲ. ಇದರಿಂದ ಬಹಳಷ್ಟು ತೊಂದರೆ ಆಗಿದೆ. ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಅಲ್ಲದೆ, ಇವತ್ತು ದುಡಿದರೆ ಮಾತ್ರ ಊಟ ಎನ್ನುವ ಸ್ಥಿತಿಯಲ್ಲಿ ಮಕ್ಕಳ ಪಾಲಕರಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಮಕ್ಕಳ ಸಂಪೂರ್ಣ ವೈದ್ಯಕೀಯ ಖರ್ಚು ಮತ್ತು ಕುಟುಂಬ ನಿರ್ವಹಣೆಗೆ ಪರಿಹಾರ ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಪಂ ಸದಸ್ಯ ಮಂಜುನಾಥ ಸೀತಮ್ಮನವರ, ಶಿವಣ್ಣ ಕಬ್ಬೇರ, ದೇವಣ್ಣ ಮತ್ತೂರ, ರಾಜು ಬೆಂಚಳ್ಳ, ಮಾರುತಿ ಹೊಳಲ, ಕೊಟ್ರೇಶ ಬೆಣ್ಣಿಮಠ, ವಿನಾಯಕ ಶಿರೋಳ, ಇತರರು ಇದ್ದರು.