ಅಂಗನವಾಡಿಗೆ ಸಿಕ್ಕಿತು ಬಾಡಿಗೆ ಮನೆ

ರೋಣ: ಹಲವು ವರ್ಷಗಳಿಂದ ಸ್ವಂತ ಸೂರಿಲ್ಲದೆ, ತಲೆ ಮೇಲೆ ಉದುರಿ ಬೀಳುವ ಛಾವಣಿ ಸಿಮೆಂಟಿನ ಅಕ್ಕಮಹಾದೇವಿ ದೇವಸ್ಥಾನವೊಂದರ ಮೂಲೆಯಲ್ಲಿ ನಡೆಯುತ್ತಿದ್ದ ಅಂಗನವಾಡಿ ಕೇಂದ್ರ ಸಂಖ್ಯೆ 11ಕ್ಕೆ ಬಾಡಿಗೆ ಮನೆ ಸಿಕ್ಕಿದ್ದು, ಗುರುವಾರ ಸ್ಥಳಾಂತರಗೊಂಡಿದೆ.

ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಎಸ್.ಸಿ. ನಾಗನಗೌಡ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಆರ್.ಎಲ್. ಚಂದ್ರಣ್ಣವರ ಗುರುವಾರ ಮಧ್ಯಾಹ್ನದ ಹೊತ್ತಿಗೆ ಪಟ್ಟಣದ ಅಂಗನವಾಡಿ ಕೇಂದ್ರ ಸಂಖ್ಯೆ 11 ಅನ್ನು ವಿಶಾಲವಾದ ಬಾಡಿಗೆ ಮನೆಗೆ ಸ್ಥಳಾಂತರಗೊಳಿಸಿದ್ದಾರೆ. ಬುಧವಾರದ ಸಂಚಿಕೆಯಲ್ಲಿ ‘ಜೀವಭಯದಲ್ಲಿಯೇ ಮಕ್ಕಳ ಕಲಿಕೆ’ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ಸಮಗ್ರ ವರದಿ ಪ್ರಕಟಿಸಿತ್ತು.

ಈಗ ನೆಮ್ಮದಿ ಸಿಕ್ಕಂಗಾಗಿದೆ. ಇಷ್ಟು ವರ್ಷ ಜೀವಾ ಕೈಯಾಗ ಹಿಡಿಕೊಂಡು ಅಂಗನವಾಡಿ ನಡೆಸುತ್ತಿದ್ದೆ. ಇಂತಹ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದು ಕಷ್ಟಸಾಧ್ಯವಾಗಿತ್ತು. ಇನ್ನು ಮೇಲೆ ಮಕ್ಕಳು ಆಟ-ಪಾಠ ಚೆನ್ನಾಗಿ ನಡೆಯುತ್ತದೆ.

| ಎಸ್.ಎಸ್. ಬಾವಿ ಅಂಗನವಾಡಿ ಕಾರ್ಯಕರ್ತೆ

ಈಗ ಚಿಂತಿ ಬಿಟ್ಟಿತು ನೋಡ್ರೀ.. ನಮ್ಮ ಮಗಳನ್ನು ಅಂಗನವಾಡಿಗೆ ಕಳಿಸಿ ಮನಿಯ್ಯಾಗ್ ಬಂದ್ರ ಜೀವದಾಗ್ ಜೀವ ಇರತಿದ್ದಿಲ್ರೀ.. ಅಂತಾ ದುಸ್ಥಿತಿಯಲ್ಲಿ ಅಂಗನವಾಡಿ ಕೇಂದ್ರ ಇತ್ರೀ. ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ರೂ ಯಾರೂ ಕೇಳತಿದ್ದಿಲ್ರಿ. ಹೊಸ ಬಾಡಿಗೆ ಮನೆಯೇ ಇಲ್ಲಿ ಸಿಗುವುದಿಲ್ಲ ಅನ್ನುತ್ತಿದ್ದರು. ಈಗ ನೋಡ್ರಿ ಒಂದೇ ದಿನದಾಗ ಹ್ಯಾಂಗ ಬಾಡಿಗೆ ಮನಿ ಸಿಕ್ಕಿದೆ.

| ಭಾರತಿ ಹೊಂಬಳ ಅಂಗನವಾಡಿ ಮಕ್ಕಳ ಪಾಲಕಿ