ಅಂಗನವಾಡಿಗೆ ಬೀಗ ಜಡಿದು ಪ್ರತಿಭಟನೆ

ಲಕ್ಷೆ್ಮೕಶ್ವರ: ತಾಲೂಕಿನ ಸೂರಣಗಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 185ರಲ್ಲಿ ಖಾಲಿ ಇರುವ ಕಾರ್ಯಕರ್ತೆ ಹುದ್ದೆಗೆ ಮೀಸಲಾತಿಯನ್ವಯ ಎಸ್​ಸಿ ಮಹಿಳೆಯನ್ನು ಭರ್ತಿ ಮಾಡಬೇಕು ಎಂದು ಗ್ರಾಮದ ಅಂಬೇಡ್ಕರ್ ಓಣಿ ನಿವಾಸಿಗಳು ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ, ಹಲಗೆ ಬಾರಿಸುವ ಮೂಲಕ ಬುಧವಾರ ಪ್ರತಿಭಟನೆ ನಡೆಸಿದರು.

2006-07ರಲ್ಲಿ ಅಂಗನವಾಡಿ ಕೇಂದ್ರ ಸಂಖ್ಯೆ 185ಕ್ಕೆ ಎಸ್​ಸಿ ಮೀಸಲಾತಿಯಡಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಭರ್ತಿ ಮಾಡಲಾಗಿತ್ತು. ಅವರು 2 ವರ್ಷಗಳ ಹಿಂದೆ ವಿವಾಹವಾಗಿ ಬೇರೆ ಜಿಲ್ಲೆಗೆ ವರ್ಗಾವಣೆಯಾಗಿದ್ದರಿಂದ ಹುದ್ದೆ ಖಾಲಿ ಇತ್ತು. ಆದರೆ, ಈಗ ಆ ಸ್ಥಾನಕ್ಕೆ ಮೀಸಲಾತಿಯನ್ವಯ ಎಸ್​ಸಿ ಮಹಿಳೆ ನೇಮಕ ಮಾಡುವುದನ್ನು ಬಿಟ್ಟು ದೊಡ್ಡೂರ ತಾಂಡಾದ ಅಂಗನವಾಡಿ ಕಾರ್ಯಕರ್ತೆ (ಎಸ್​ಟಿ ವರ್ಗ)ಯನ್ನು ವರ್ಗಾವಣೆ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಸಿಡಿಪಿಒ ಅವಿನಾಶ ಗೋಡಖಿಂಡಿ ಮಾತನಾಡಿ, ‘ಖಾಲಿ ಹುದ್ದೆಗೆ ಅರ್ಜಿ ಆಹ್ವಾನಿಸಿಲ್ಲ. ಪಕ್ಕದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವೈದ್ಯಕೀಯ ಪ್ರಮಾಣ ಪತ್ರ ಲಗತ್ತಿಸಿ ಅರ್ಜಿ ಸಲ್ಲಿಸಿದ್ದರಿಂದ ಮಾನವೀಯತೆ ಆಧಾರದ ಮೇಲೆ ಸೂರಣಗಿ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಹೊಸ ಹುದ್ದೆಗೆ ಮಾತ್ರ ರೋಸ್ಟರ್ ಅನ್ವಯಿಸುತ್ತದೆ. ಆದ್ದರಿಂದ ಕಾನೂನಿನ ಚೌಕಟ್ಟಿನಲ್ಲಿಯೇ ವರ್ಗಾವಣೆ ಮಾಡಲಾಗಿದೆ. ನಡೆದಿರುವ ಬೆಳವಣಿಗೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ಕಾರ್ಯಕರ್ತೆ ಹುದ್ದೆಯನ್ನು ಎಸ್​ಸಿ ಜನಾಂಗದವರಿಗೆ ನೀಡದಿದ್ದರೆ ಅಂಗನವಾಡಿಯ ಬೀಗ ತೆರೆಯಲು ಬಿಡುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ನಿರ್ಣಯ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ನಿವಾಸಿಗಳು ಪಟ್ಟು ಹಿಡಿದಿದ್ದಾರೆ.

ತಾಪಂ ಮಾಜಿ ಸದಸ್ಯ ಕೋಟೆಪ್ಪ ವರ್ದಿ, ಗ್ರಾಪಂ ಸದಸ್ಯರಾದ ಲಕ್ಷ್ಮವ್ವ ತಳಗೇರಿ, ದೇವಕ್ಕ ಹರಿಜನ, ಶರಣಪ್ಪ ಇಚ್ಚಂಗಿ, ಹೆಗ್ಗಪ್ಪ ಪೂಜಾರ, ರಮೇಶ ಹಂಗನಕಟ್ಟಿ, ಮಾಳೆಪ್ಪ ನಡುವಿನಮನಿ, ಯಮನಪ್ಪ ಜಗಟೆಪ್ಪನವರ, ಬಸವರಾಜ ಹರಿಜನ, ಶಿವಪ್ಪ ಮ್ಯಾಗೇರಿ, ಶಿವಣ್ಣ ತಳಗೇರಿ, ಕರಿಯಪ್ಪ ಪೂಜಾರ, ಮರಿಯಪ್ಪ ಎಚ್., ಕೋಟೆಪ್ಪ, ಮಾಲತೇಶ, ಶರೀಪ, ನಾಗಪ್ಪ, ಬಸಪ್ಪ ಪೂಜಾರ ಇತರರು ಇದ್ದರು.

Leave a Reply

Your email address will not be published. Required fields are marked *