ಅಂಗನವಾಡಿಗೆ ಗುಣಮಟ್ಟದ ಆಹಾರ ಪೂರೈಸಿ

ಮುಂಡರಗಿ: ಅಂಗನವಾಡಿ ಮಕ್ಕಳಿಗೆ ಕಳಪೆ ಮಟ್ಟದ ಶೇಂಗಾಬೀಜ ವಿತರಿಸಲಾಗುತ್ತಿದ್ದು, ಶೇಂಗಾದಲ್ಲಿ ಹುಳುಗಳೇ ಇರುತ್ತವೆ. ಆದ್ದರಿಂದ ತಾಲೂಕಿನ ಪ್ರತಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಗುಣಮಟ್ಟದ ಆಹಾರ ಪೂರೈಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ. ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ ಅವರು ಸಿಡಿಪಿಒ ದಸ್ತಿಗೀರ್ ಮುಲ್ಲಾ ಅವರಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ತಾಲೂಕಿನಲ್ಲಿ ಮುಂಗಾರು ಮಳೆ ಇಲ್ಲದೇ ಬರಗಾಲದ ಛಾಯೆ ಆವರಿಸಿದ್ದು, ಕುಡಿಯುವ ನೀರಿನ ಸಮಸ್ಯೆ ಬಹುತೇಕ ಭಾಗದಲ್ಲಿ ಕಂಡು ಬರುತ್ತಿದೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಬಸವರಾಜ ಕೆ ಮಾತನಾಡಿ, ಡೆಂಘೆ, ಚಿಕೂನ್​ಗುನ್ಯಾ, ಮಲೇರಿಯಾ ರೋಗ ಹರಡದಂತೆ ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ. ರೋಗ ಕಂಡು ಬಂದರೆ ತಕ್ಷಣ ಚಿಕಿತ್ಸೆ ನೀಡಲು ಸೂಕ್ತ ಸಿಬ್ಬಂದಿ ನೇಮಿಸಲಾಗಿದೆ ಎಂದರು.

ತಾ.ಪಂ. ಸದಸ್ಯ ರುದ್ರಗೌಡ ಪಾಟೀಲ ಮಾತನಾಡಿ, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರು, ನರ್ಸ್​ಗಳಿಲ್ಲ. ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದ ಕಾರಣಕ್ಕೆ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಚಿಕಿತ್ಸೆ ನೀಡಲು ಅಗತ್ಯವಿರುವ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಆರೋಗ್ಯಾಧಿಕಾರಿಗೆ ಒತ್ತಾಯಿಸಿದರು.

ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಮಾತನಾಡಿ, ಬ್ಯಾಲವಾಡಗಿ ತೋಟಗಾರಿಕೆ ಕ್ಷೇತ್ರದಲ್ಲಿ 12 ಸಾವಿರ ತೆಂಗಿನ ಸಸಿ ತಯಾರಿಸಲಾಗಿದ್ದು ಒಬ್ಬ ರೈತರಿಗೆ 16 ಸಸಿಗಳನ್ನು ವಿತರಿಸಲಾಗುತ್ತದೆ. 6 ತರಹದ ಒಟ್ಟು 2 ಸಾವಿರ ತರಕಾರಿ ಬೀಜ ತರಿಸಲಾಗಿದೆ. ಒಟ್ಟು 625 ಜನರಿಗೆ ವಿತರಿಸಲಾಗುವುದು ಎಂದರು.

ತಾ.ಪಂ.ಇಒ ಎಸ್.ಎಸ್.ಕಲ್ಮನಿ, ತಾ.ಪಂ.ಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ಸದಸ್ಯರಾದ ಕುಸುಮಾ ಮೇಟಿ, ರುದ್ರಪ್ಪ ಬಡಿಗೇರಿ, ಭರಮಪ್ಪ ನಾಗನೂರ, ಬಸಪ್ಪ ಮಲ್ಲನಾಯ್ಕರ, ಪುಷ್ಪಾ ಪಾಟೀಲ, ಲಲಿತಾ ಯಲಿಗಾರ, ವೆಂಕಪ್ಪ ಬಳ್ಳಾರಿ, ತಿಪ್ಪಮ್ಮ ಕಾರಬಾರಿ, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಗುರುಭವನ ಕಾಮಗಾರಿ ಕೈಗೊಳ್ಳಿಬಿಇಒ ಎಸ್.ಎನ್.ಹಳ್ಳಿಗುಡಿ ಮಾತನಾಡಿ, ಮೇ.29ರಿಂದ ತಾಲೂಕಿನ ಎಲ್ಲ ಶಾಲೆಗಳು ಪ್ರಾರಂಭಗೊಂಡಿವೆ. ಮಕ್ಕಳಿಗೆ ಪಠ್ಯೆಪುಸ್ತಕ ವಿತರಿಸಲಾಗುತ್ತಿದೆ. ಗುರುಭವನಕ್ಕೆ ಅನುದಾನ ಬಿಡುಗಡೆಯಾದರೂ ನಿರ್ವಿುತಿ ಕೇಂದ್ರದವರು ಕಾಮಗಾರಿ ಕೈಗೊಂಡಿಲ್ಲ. ಭೂಸೇನಾ ಇಲಾಖೆಯವರು ರಾಮೇನಹಳ್ಳಿ, ಕೊರ್ಲಹಳ್ಳಿ, ಮತ್ತಿತರ ಶಾಲೆಗಳಲ್ಲಿ ಕೈಗೊಂಡಿರುವ ಕೊಠಡಿ ಕಾಮಗಾರಿ 2ವರ್ಷ ಕಳೆದರೂ ಪೂರ್ಣಗೊಳಿಸಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ತಾ.ಪಂ.ಸದಸ್ಯರು, ತಕ್ಷಣ ಕೊಠಡಿ ಕಾಮಗಾರಿ ಪೂರ್ಣಗೊಳಿಸಬೇಕು. ಹಾಗೆಯೇ ಗುರುಭವನ ಕಾಮಗಾರಿ ಕೈಗೊಳ್ಳಬೇಕು ಎಂದು ಭೂಸೇನಾ ಇಲಾಖೆ ಹಾಗೂ ನಿರ್ವಿುತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಿಂದ ಹೊರ ನಡೆದ ರುದ್ರಗೌಡ:ಗ್ರಾಮೀಣ ಕುಡಿಯುವ ನೀರು ಸರಬುರಾಜು ಇಲಾಖೆ ಎಇಇ ವೈ.ಬಿ.ಕುದರಿ ಅವರು ತಮ್ಮ ಇಲಾಖೆ ವ್ಯಾಪ್ತಿ ಕೈಗೊಂಡ ಕಾಮಗಾರಿ ಕುರಿತು ವಿವರಿಸುವಾಗ ಮಧ್ಯ ಪ್ರವೇಶಿಸಿದ ಕೊರ್ಲಹಳ್ಳಿ ತಾ.ಪಂ.ಸದಸ್ಯ ರುದ್ರಗೌಡ ಪಾಟೀಲ, ನಮ್ಮ ಕ್ಷೇತ್ರದಲ್ಲಿ ಕೈಗೊಳ್ಳುವ ಕಾಮಗಾರಿಯನ್ನು ನಮ್ಮ ಗಮನಕ್ಕೆ ತರದೇ ಕೈಗೊಂಡಿದ್ದೀರಲ್ಲ? ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕುದುರಿ, ಶಾಸಕದ ಸೂಚನೆ ಮೇರೆಗೆ ಕಾಮಗಾರಿ ಪ್ರಾರಂಭಿಸಿದ್ದೇವೆ ಎಂದರು. ‘ಅಲ್ಲಿನ ಜನರು ಕೇವಲ ಶಾಸಕರಿಗೆ ಮಾತ್ರ ಮತ ಹಾಕಿಲ್ಲ, ನಮಗೂ ಮತ ಹಾಕಿದ್ದಾರೆ. ನಮಗೆ ತಿಳಿಸದೇ ಕಾಮಗಾರಿ ಕೈಗೊಳ್ಳುವುದಾದರೇ ನಾವು ಜನಪ್ರತಿನಿಧಿ ಆಗಿದ್ದು ಏನು ಪ್ರಯೋಜನ? ಸಭೆಯಲ್ಲಿ ಏಕೆ ಇರಬೇಕು’ ಎಂದು ಅಸಮಾಧಾನಗೊಂಡ ರುದ್ರಗೌಡ ಅವರು ಸಭೆಯಿಂದ ಹೊರ ನಡೆದರು. ಅವರ ಜೊತೆಗೆ ಬಸಪ್ಪ ಮಲ್ಲನಾಯ್ಕರ, ತಿಪ್ಪಮ್ಮ ಕಾರಬಾರಿ ಸಹ ಹೆಜ್ಜೆ ಹಾಕಿದರು.

Leave a Reply

Your email address will not be published. Required fields are marked *