ಅಂಗನವಾಡಿಗಳು ಸುರಕ್ಷವಾಗಿರಲಿ

ಶಿರಸಿ: ಸುರಕ್ಷತೆಯ ಸಲುವಾಗಿ ಅಂಗನವಾಡಿ ಮಕ್ಕಳು ಇರುವ ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಒಲೆ ಬಳಸದಂತೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿದ್ದಾರೆ. ಈ ರೀತಿಯ ಅಂಗನವಾಡಿಗಳು ನಗರ ಪ್ರದೇಶದಲ್ಲೇ ಜಾಸ್ತಿ ಇದೆ. ಹಾಗಾಗಿ ಸಿಲಿಂಡರ್ ಅನ್ನು ಕಾರ್ಯಕರ್ತೆಯರು ತಮ್ಮ ಮನೆಗೆ ಸಾಗಿಸುವಂತೆ ಇಲಾಖೆಯೇ ಅನಿವಾರ್ಯವಾಗಿ ಸೂಚಿಸಿದೆ !

ಅಂಗನವಾಡಿಗಳಲ್ಲಿ ಸುರಕ್ಷತೆ ಕಾಯ್ದುಕೊಳ್ಳಲಾಗುತ್ತಿಲ್ಲ ಎಂಬ ಸಾರ್ವಜನಿಕರ ಆಕ್ಷೇಪದ ಹಿನ್ನೆಲೆಯಲ್ಲಿ ಜಿಲ್ಲಾ ಲೋಕಾಯುಕ್ತ ತಂಡ ಕಳೆದ ವಾರ ಎಲ್ಲೆಡೆ ಅಂಗನವಾಡಿಗಳನ್ನು ಭೇಟಿ ಮಾಡಿ ಪರಿಶೀಲಿಸಿದೆ. ಬಹುತೇಕ ಅಂಗನವಾಡಿಗಳಿಗೆ ಮಕ್ಕಳು ಇರುವ ಜಾಗದಲ್ಲಿಯೇ ಸಿಲಿಂಡರ್ ಇಟ್ಟುಕೊಂಡು ಅಡುಗೆ ಸಿದ್ಧಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅವರು ಕೆಲ ಸೂಚನೆಗಳನ್ನು ನೀಡಿದ್ದಾರೆ. ಈ ಸೂಚನೆಗಳನ್ನು ಅಳವಡಿಸಿಕೊಳ್ಳುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿ ಎಲ್ಲ ಸಿಡಿಪಿಒಗೆ ಸುತ್ತೋಲೆ ಕಳಿಸಿದೆ. ‘ಒಂದೇ ಕೊಠಡಿಯಲ್ಲಿ ಮಕ್ಕಳು ಮತ್ತು ಸಿಲಿಂಡರ್ ಇರದಂತೆ ನೋಡಿಕೊಳ್ಳಬೇಕು. ಗ್ಯಾಸ್ ಸಿಲಿಂಡರ್ ಸ್ಥಳಾಂತರಿಸಿದ ಬಗ್ಗೆ ಮೂರು ದಿನಗಳ ಒಳಗೆ ಜಿಲ್ಲಾ ಕಚೇರಿಗೆ ವರದಿ ಸಲ್ಲಿಸಬೇಕು. ಮಕ್ಕಳಿರುವ ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್ ಕಂಡುಬಂದಲ್ಲಿ ಮೇಲ್ವಿಚಾರಕಿ ಮತ್ತು ಶಿಶು ಅಭಿವೃದ್ಧಿ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವುದಾಗಿ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ತಾಲೂಕಿನಲ್ಲಿ 351 ಅಂಗನವಾಡಿಗಳಿದ್ದು, 245ಕ್ಕೆ ಸ್ವಂತ ಕಟ್ಟಡವಿದೆ. 47 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದರೆ, ಇನ್ನುಳಿದವು ಯಾರದೋ ಮನೆಯ ಜಗುಲಿಯಲ್ಲಿ, ಸಮುದಾಯ ಭವನಗಳಲ್ಲಿ ನಡೆಯುತ್ತಿವೆ. ಸ್ವಂತ ಕಟ್ಟಡ ಹೊಂದಿರುವ ಅಂಗನವಾಡಿಗಳಲ್ಲಿ ಸಿಲಿಂಡರ್ ಸ್ಥಳಾಂತರಿಸಬೇಕಾದ ಅಗತ್ಯತೆ ಇಲ್ಲ. ಆಹಾರ ತಯಾರಿಕೆಗೆ ಪ್ರತ್ಯೇಕ ಕೊಠಡಿ ಈ ಅಂಗನವಾಡಿಗಳಲ್ಲಿವೆ. ಆದರೆ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ 20ಕ್ಕೂ ಅಧಿಕ ಅಂಗನವಾಡಿಗಳಲ್ಲಿ ಅನಿವಾರ್ಯವಾಗಿ ಒಂದೇ ಕೊಠಡಿಯಲ್ಲಿ ಮಕ್ಕಳನ್ನಿಟ್ಟುಕೊಂಡು ಗ್ಯಾಸ್ ಸಿಲಿಂಡರ್ ಮೂಲಕ ಅಡುಗೆ ಸಿದ್ಧಪಡಿಸಲಾಗುತ್ತಿತ್ತು. ಕಟ್ಟಡದ ಬಾಡಿಗೆ ಹಣ 3 ಸಾವಿರ ರೂ. ಮಾತ್ರ ಸರ್ಕಾರದಿಂದ ಬರುವ ಕಾರಣ ಈ ಹಣದಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಅಂಗನವಾಡಿ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ. ಅಲ್ಲದೆ, ಕೆಲ ವೇಳೆ 2-3 ತಿಂಗಳಿಗೊಮ್ಮೆ ಬಾಡಿಗೆ ಹಣ ಬಿಡುಗಡೆಯಾಗಿ ಕಾರ್ಯಕರ್ತೆಯರು ಬಾಡಿಗೆ ಹಣ ನೀಡಿದ ಘಟನೆಗಳೂ ನಡೆಯುತ್ತಿವೆ.

ಕೆಲ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಡುಗೆ ತಯಾರಿಕೆಯ ಪಾತ್ರೆಗಳಿಲ್ಲ. ಮಾತೃಪೂರ್ಣ ಯೋಜನೆಯ ಅಡಿಯಲ್ಲಿ ತಕ್ಷಣವೇ ಸೂಕ್ತ ಗಾತ್ರದ ಪಾತ್ರೆಗಳನ್ನು ಖರೀದಿಸಬೇಕು. ಕೆಲ ಅಂಗನವಾಡಿಗಳಲ್ಲಿ ಮೇಲ್ಛಾವಣಿ ಸಿಮೆಂಟ್ ಶೀಟ್ ಒಡೆದಿದ್ದು, ತಾಲೂಕು ಪಂಚಾಯಿತಿಯನ್ನು ಸಂರ್ಪಸಿ ಕೊರತೆಯನ್ನು ಸರಿಪಡಿಸಿಕೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಬೇರೆಡೆ ಸಿಲಿಂಡರ್ ಸ್ಥಳಾಂತರಿಸಿ

ನಗರ ಪ್ರದೇಶದಲ್ಲಿ ಮಕ್ಕಳಿರುವ ಕೊಠಡಿಯಲ್ಲಿ ಅಡುಗೆ ತಯಾರಿಸುವ ಅಂಗನವಾಡಿಗಳು ಜಾಸ್ತಿಯಾಗಿರುವ ಕಾರಣ ಸಿಡಿಪಿಒ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬದಲಿ ವ್ಯವಸ್ಥೆ ಆಗುವವರೆಗೆ ಸಿಲಿಂಡರ್ ಅನ್ನು ಬೇರೆಡೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.