ಅಂಗಡಿ, ಮಳಿಗೆ ತೆರವಿನಲ್ಲಿ ದುರುದ್ದೇಶವಿಲ್ಲ

ಹಳೇ ಸುಭಾಷ್ ಪಾರ್ಕ್ ಹೊಂದಿಕೊಂಡಂತೆ ಹುಲ್ಲಹಳ್ಳಿ ನಾಲೆ ಮೇಲಿನ ರುವ ಕವರ್ ಡೆಕ್ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲು ಅನಧಿಕೃತ ಅಂಗಡಿ, ಮಳಿಗೆಗಳನ್ನು ತೆರವುಗೊಳಿಸಲಾಗುತ್ತಿದ್ದು, ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಶಾಸಕ ಬಿ.ಹರ್ಷವರ್ಧನ್ ಸ್ಪಷ್ಟಪಡಿಸಿದರು.
ಕವರ್ ಡೆಕ್‌ನಲ್ಲಿ ತಲೆ ಎತ್ತಿರುವ ಅನಧಿಕೃತ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ ಆ ಪ್ರದೇಶದ ಉದ್ಯಾನ ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ. ಸರ್ಕಾರಿ ಬಾಲಕಿಯ ಪದವಿ ಪೂರ್ವ ಕಾಲೇಜಿನ ಮುಖ್ಯದ್ವಾರಕ್ಕೆ ನಾಲೆಯ ಕವರ್ ಡೆಕ್ ಮೂಲಕವೇ ಸಂಪರ್ಕ ಒದಗಿಸುವುದರಿಂದ ವಿದ್ಯಾರ್ಥಿನಿಯರು ಬಸ್ ನಿಲ್ದಾಣಕ್ಕೆ ತೆರಳಲು ಅನುಕೂಲವಾಗುತ್ತದೆ. ಜತೆಗೆ ನಾಲೆಯ ಏರಿ ಮಾರ್ಗವನ್ನು ರಾಷ್ಟ್ರಪತಿ ರಸ್ತೆ ಹಾಗೂ ಎಂಜಿಎಸ್ ರಸ್ತೆಯ ಲಿಂಕ್ ರಸ್ತೆಯಾಗಿ ಮಾಡಬಹುದಾಗಿದೆ. ಹಾಗಾಗಿ ಅಂಗಡಿಗಳನ್ನು ತೆರವುಗೊಳಿಸಲು ನಗರಸಭೆ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಈ ಅಂಶಗಳನ್ನು ಅಂಗಡಿ ಮಾಲೀಕರಿಗೆ ಮನದಟ್ಟು ಮಾಡಿಕೊಟ್ಟ ಶಾಸಕರು, ತಮ್ಮ ವ್ಯಾಪಾರ ವಹಿವಾಟಿಗೆ ಶ್ರೀರಾಂಪುರ ಮುಖ್ಯರಸ್ತೆ ಸಮೀಪ ಪರ್ಯಾಯ ಜಾಗ ಗುರುತಿಸಲಾಗಿದೆ. ಆ ಪ್ರದೇಶವನ್ನು ನೀರಾವರಿ ಹಾಗೂ ನಗರಸಭೆ ಜಂಟಿಯಾಗಿ ಬಾಡಿಗೆ ನಿಗದಿ ಮಾಡಿ ಹಂಚಿಕೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದರು.
ಕವರ್ ಡೆಕ್ ಮೇಲಿನ ಮಾಂಸ ಹಾಗೂ ತರಕಾರಿ ಮಾರುಕಟ್ಟೆಗೆ ನೀಡಲಾಗಿರುವ ಅಂಗಡಿಗಳನ್ನು ಸದ್ಯಕ್ಕೆ ತೆರವುಗೊಳಿಸುವುದಿಲ್ಲ. ಬಜಾರ್ ರಸ್ತೆಯಲ್ಲಿ ಮಾರುಕಟ್ಟೆ ಪ್ರಾಂಗಣ ನಿರ್ಮಾಣ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು ಉದ್ಘಾಟನೆ ಬಳಿಕ ಸ್ಥಳಾಂತರಗೊಳಿಸುವುದಾಗಿ ತಿಳಿಸಿದರು.

ಓಟ್ ಬ್ಯಾಂಕ್ ರಾಜಕಾರಣ ನನ್ನದಲ್ಲ:
ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟಿರುವ ನನಗೆ ಕೆಲವು ನ್ಯೂನತೆಗಳನ್ನು ಸರಿಪಡಿಸಲು ಮುಂದಾದರೆ ಸಂಸದ ಆರ್.ಧ್ರುವನಾರಾಯಣ ಅಡ್ಡಿಯುಂಟು ಮಾಡುತ್ತಿರುವುದು ಸರಿಯಲ್ಲ. ನಾನು ಓಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ, ಮತದಾರರ ನಿರೀಕ್ಷೆಯಂತೆ ಅಭಿವೃದ್ಧಿ ರೂಪಿಸುವುದು ನನ್ನ ಅಜೆಂಡಾ ಎಂದು ಶಾಸಕ ಹೇಳಿದರು.
ತಾಲೂಕಿನ ಚಿಕ್ಕ ಕವಲಂದೆ ಗ್ರಾಮದಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿ ಚರಂಡಿ ನಿರ್ಮಿಸಿ ಅಡ್ಡಿಪಡಿಸುತ್ತಿದ್ದರಿಂದ ನಿವಾಸಿಗಳು ತೊಂದರೆಗೀಡಾಗಿದ್ದರು. ಒತ್ತುವರಿ ತೆರವಿಗೆ ಮುಂದಾದರೆ ಅಲ್ಲಿಯೂ ಧ್ರುವನಾರಾಯಣ ಅಡ್ಡಿಪಡಿಸಿದರು. ಇದೀಗ ಅನಧಿಕೃತ ಅಂಗಡಿಗಳ ತೆರವಿಗೆ ಮುಂದಾದರೆ ಅದಕ್ಕೂ ತಡೆಯೊಡ್ಡುತ್ತಿದ್ದಾರೆ. ಶಾಸಕನಾಗಿ ನನ್ನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಸಂಸದರಾಗಿ ಅವರು ತಮ್ಮ ವ್ಯಾಪ್ತಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಲಿ ಎಂದರು.
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯ್ಕ, ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಬಾಲಚಂದ್ರು, ರಂಗಸ್ವಾಮಿ, ದೇವೀರಮ್ಮನಹಳ್ಳಿ ಬಸವರಾಜು, ಶಿರಮಳ್ಳಿ ಮಹದೇವಸ್ವಾಮಿ, ಪ್ರಜ್ವಲ್ ಶಶಿ, ಮಲ್ಕುಂಡಿ ಪುಟ್ಟಸ್ವಾಮಿ, ಅನಂತು, ಉಮೇಶ್ ಮೋದಿ ಮತ್ತಿತರರು ಹಾಜರಿದ್ದರು.