ಅಂಕೋಲಾಕ್ಕೆ ನೀರು ಪೂರೈಕೆ ಸ್ಥಗಿತ

ಅಂಕೋಲಾ: ಗಂಗಾವಳಿ ನದಿ ಬತ್ತಿರುವುದರಿಂದ ತಾಲೂಕಿನ ಕೆಲ ಪ್ರದೇಶಗಳಿಗೆ ನೀರು ಪೂರೈಕೆಯನ್ನು ಸಂಪೂರ್ಣವಾಗಿ ನಿಲುಗಡೆ ಮಾಡಲಾಗಿದೆ. ಇದರಿಂದ ತಾಲೂಕಿನಲ್ಲಿರುವ 4 ಸಾವಿರಕ್ಕೂ ಹೆಚ್ಚು ನಲ್ಲಿಗಳು ಬಂದ್ ಆಗಿವೆ. ಈಗ ಪುರಸಭೆಯವರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ, ತೀರಾ ಕಿರಿದಾದ ರಸ್ತೆಯಲ್ಲಿ ವಾಹನ ಹೋಗದ ಕಾರಣ ಕೆಲ ಪ್ರದೇಶಗಳ ಜನರು ನೀರಿಗಾಗಿ ಪರಿತಪಸುತ್ತಿದ್ದಾರೆ.

ಗಂಗಾವಳಿ ನದಿಗೆ ಹೊನ್ನಳ್ಳಿ ಸಮೀಪವಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಿತ್ಯ 18 ದಶಲಕ್ಷ ಲೀಟರ್ ನೀರನ್ನು ಅಂಕೋಲಾ ಮತ್ತು ಕಾರವಾರ ತಾಲೂಕುಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಅಂಕೋಲಾ, ಕಾರವಾರ ಪಟ್ಟಣ, ಸೀಬರ್ಡ್ ನೌಕಾನೆಲೆ, ಬಿಣಗಾದ ಆದಿತ್ಯ ಬಿರ್ಲಾ ಕಂಪನಿಗೂ ಈ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಅಧಿಕಾರಿಗಳು ಅಂಕೋಲಾಕ್ಕೆ ನೀರು ಬಿಡುವುದನ್ನು ಸ್ಥಗಿತಗೊಳಿಸಿದ್ದಾರೆ.

ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಕಳೆದ ವರ್ಷದತನಕ ನೀರು ಸರಬರಾಜು ಮಾಡಿತು. ಆದರೆ, ಈ ವರ್ಷ ಹಿಂದೆಂದೂ ಕಾಣದ ಬರ ನದಿ ನೀರಿಗೂ ಎದುರಾಗಿದ್ದು, ಕುಡಿಯುವ ನೀರಿಗಾಗಿ ಜನರು ಪರಿತಪಿಸುವಂತಾಗಿದೆ. ಕಳೆದ ವರ್ಷದವರೆಗೂ ಹೊನ್ನಳ್ಳಿಯ ಸಂಗ್ರಹಾಲಯದಲ್ಲಿ ತುಂಬಿ ತುಳುಕುತ್ತಿದ್ದ ನೀರು ತಳ ಸೇರಿದೆ. ಹೊನ್ನಳ್ಳಿಯಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಕೆಸರುಹೊಂಡದಿಂದ ನೀರು ಸರಬರಾಜು ಮಾಡುವ ಪ್ರಯತ್ನಗಳು ಸಾಗಿವೆ.

ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ ನೇತೃತ್ವದ ತಂಡವು ಹೊನ್ನಳ್ಳಿಗೆ ಆಗಮಿಸಿ ವಾಸ್ತವಾಂಶ ಪರಿಶೀಲಿಸಿದೆ. ಈ ಹಿಂದೆ 150 ಎಚ್.ಪಿ. ಸಾಮರ್ಥ್ಯದ ವಿದ್ಯುತ್ ಪಂಪ್ ಮೂಲಕ ನೀರೆತ್ತಿ ಸಂಗ್ರಹಾಲಯಕ್ಕೆ ಭರ್ತಿ ಮಾಡುತ್ತಿದ್ದರು. ಸಂಗ್ರಹಗೊಂಡ ನೀರನ್ನು 750 ಎಚ್.ಪಿ. ಸಾಮರ್ಥ್ಯದ ವಿದ್ಯುತ್ ಪಂಪ್ ಮೂಲಕ ಕಾರವಾರ, ಅಂಕೋಲಾ ತಾಲೂಕುಗಳಿಗೆ ಸರಬರಾಜು ಮಾಡುತ್ತಿದ್ದರು.

ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದ ಪಂಪ್​ಗಳು ನೀರಿಲ್ಲದ ಕಾರಣ ಈಗ ಅರ್ಧ ಗಂಟೆ ಕೂಡ ಕೆಲಸ ಮಾಡದಂಥ ಸ್ಥಿತಿ ತಲೆದೋರಿದೆ. ಹೀಗಾಗಿ, ಕೆಸರುಹೊಂಡದಲ್ಲಿರುವ ನೀರಿನತ್ತ ಮಂಡಳಿಯವರು ಕಣ್ಣಿಟ್ಟಿದ್ದಾರೆ. ಆದರೆ, ಕೆಸರುಹೊಂಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗದ ಕಾರಣ ಡೀಸೆಲ್ ಪಂಪನ್ನೇ ಅವಲಂಬಿಸಬೇಕಿದೆ. ಅದರಲ್ಲೂ 500 ಎಚ್.ಪಿ. ಸಾಮರ್ಥ್ಯದ ಡೀಸೆಲ್ ಪಂಪ್ ದೊರೆಯದಿರುವುದು ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ, 50 ಎಚ್.ಪಿ. ಸಾಮರ್ಥ್ಯದ 10 ಪಂಪ್​ಗಳನ್ನು ಕೆಸರುಹೊಂಡಕ್ಕೆ ಅಳವಡಿಸಿ ನೀರು ಸರಬರಾಜು ಮಾಡುವ ಭಗೀರಥ ಪ್ರಯತ್ನಕ್ಕೆ ಮಂಡಳಿ ಕೈ ಹಾಕಿದೆ.

ಇನ್ನು, ತಾಲೂಕಿನ ವಿವಿಧ ಭಾಗಗಳಿಗೆ ತಾಲೂಕಾಡಳಿತದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಆದರೂ ಸರಿಯಾದ ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ. ಪಟ್ಟಣದ ಹೊನ್ನೆಕೇರಿಯ ನಿವಾಸಿ ಹಾಗೂ ಪುರಸಭೆ ಸದಸ್ಯೆ ಶಾಂತಲಾ ನಾಡಕರ್ಣಿ ಅವರು ತಮ್ಮ ಗಿಡಗಳಿಗೆ ನೀರು ಹಾಕುವುದರ ಬದಲು ಸುತ್ತಲಿನ ಜನರಿಗೆ ವಿತರಿಸುತ್ತಿದ್ದಾರೆ.

ಪಿಡಿಒಗಳು ನೀರಿನ ಕೊರತೆಯ ಬಗೆಗೆ ಸಮೀಕ್ಷೆ ನಡೆಸಿ ನಮ್ಮ ಗಮನಕ್ಕೆ ತಂದರೆ ನಾವು ಅಂಥ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಆದರೆ, ಕೆಲವರು ಮಾಹಿತಿ ನೀಡದ್ದರಿಂದ ಅಂಥ ಸ್ಥಳಗಳಿಗೆ ನೀರು ಪೂರೈಸಲು ನಮಗೆ ಆಗುತ್ತಿಲ್ಲ. ಹೀಗಾಗಿ, ಗ್ರಾಪಂನವರು ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ತಕ್ಷಣ ನಮ್ಮ ಗಮನಕ್ಕೆ ತರಬೇಕು.
| ಪ್ರವೀಣ ಜೈನ್ತ ಹಸೀಲ್ದಾರ್ ಅಂಕೋಲಾ

Leave a Reply

Your email address will not be published. Required fields are marked *