ಅಂಕಿತಾ ರೈನಾಗೆ ವರ್ಷದ ಮೊದಲ ಪ್ರಶಸ್ತಿ

ನವದೆಹಲಿ: ಭಾರತದ ಆಟಗಾರ್ತಿ ಅಂಕಿತಾ ರೈನಾ, ಸಿಂಗಾಪುರದಲ್ಲಿ ನಡೆದ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ 2019ರ ಚೊಚ್ಚಲ ಹಾಗೂ ಒಟ್ಟಾರೆ 8ನೇ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಆಸ್ಟ್ರೇಲಿಯನ್ ಓಪನ್ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ ಬಳಿಕ ಈ ಟೂರ್ನಿಗೆ ಆಗಮಿಸಿದ್ದ ಅಂಕಿತಾ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 6-3, 6-2 ನೇರ ಸೆಟ್​ಗಳಿಂದ ಅಗ್ರಶ್ರೇಯಾಂಕಿತೆ ಹಾಗೂ ವಿಶ್ವ ನಂ.122 ನೆದರ್ಲೆಂಡ್ ಆಟಗಾರ್ತಿ ಅರೆಂಕ್ಸಾ ರಸ್ ವಿರುದ್ಧ ಜಯ ದಾಖಲಿಸಿದರು. ಸುಮಾರು ಒಂದು ಗಂಟೆ 23 ನಿಮಿಷಗಳ ಕಾದಾಟದಲ್ಲಿ ಭಾರತೀಯ ಆಟಗಾರ್ತಿ ಮೇಲುಗೈ ಸಾಧಿಸಿದರು. 25 ವರ್ಷದ ಅಂಕಿತಾ ಟೂರ್ನಿಯಲ್ಲಿ ನಾಲ್ಕು ಶ್ರೇಯಾಂಕಿತ ಆಟಗಾರ್ತಿಯರ ಎದುರು ಜಯ ದಾಖಲಿಸಿದರು. ಪ್ರಶಸ್ತಿಯ ಜತೆಗೆ 50 ರೇಟಿಂಗ್ ಪಾಯಿಂಟ್ಸ್ ಕೂಡ ಅಂಕಿತ ಕಲೆಹಾಕಿದ್ದಾರೆ. ಈ ಮೂಲಕ ವಿಶ್ವ ರ್ಯಾಂಕಿಂಗ್​ನಲ್ಲಿ 168ನೇ ಸ್ಥಾನಕ್ಕೇರಿದ್ದಾರೆ. -ಪಿಟಿಐ