ಅಂಕಗಳಿಕೆಯ ಶಿಕ್ಷಣ ನಮಗೇಕೆ?

ಆನೇಕಲ್: ಪ್ರಸ್ತುತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯದ ಶಿಕ್ಷಣಕ್ಕಿಂತ ಕೇವಲ ಅಂಕ ಗಳಿಸುವುದಕ್ಕಷ್ಟೇ ಸೀಮಿತಗೊಳಿಸುತ್ತಿರುವ ಕ್ರಮ ಸರಿಯಲ್ಲ ಎಂದು ಚಿಂತಕ, ವಿಚಾರವಾದಿ ಜಿ. ಮುನಿರಾಜು ಹೇಳಿದರು.

ಪಟ್ಟಣದ ಎಎಸ್​ಬಿ ಸ್ವರ್ಣ ಮಹೋತ್ಸವ ಭವನದಲ್ಲಿ ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾಸಮಿತಿ ವಿಶ್ವ ಪರಿಸರ ದಿನಾಚರಣೆ 2019 ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಚಿತ್ರಕಲೆ , ಕಾಲೇಜು ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಸಹ ಅಂಕ ಪಡೆಯಲು ಮಾತ್ರ ಸೀಮಿತವಾಗಿದ್ದು, ಇತರೆ ವಿಷಯಗಳನ್ನು ಕಲಿಯಲು ಆಸಕ್ತಿ ತೋರದಿರುವುದು ವಿಪರ್ಯಾಸ. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಮಾನವೀಯ ಮೌಲ್ಯ ಕಲಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಹೊರ ಹೊಮ್ಮಲು ಅವಕಾಶ ದೊರೆಯಲಿದೆ ಎಂದರು.

ತಾಲೂಕು ದೈಹಿಕ ಶಿಕ್ಷಕರ ವಿಷಯ ಪರಿವೀಕ್ಷಕರಾದ ವೀರಭದ್ರಪ್ಪ ಮಾತನಾಡಿ, ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಕೇವಲ ಅಂಕ ಪಡೆದು ದೊಡ್ಡ ಉದ್ಯೋಗ ಪಡೆದು ವಿದೇಶಕ್ಕೆ ಹೋಗುವ ಮಕ್ಕಳು ತಂದೆ, ತಾಯಿಯರನನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ. ಇಂತಹ ದುರಂತದ ಶಿಕ್ಷಣ ವ್ಯವಸ್ಥೆ ನಮಗೆ ಬೇಕೇ ಎಂದು ಪ್ರಶ್ನಿಸಿದರು.

ಮಕ್ಕಳು ಅಂಕಗಳಿಸುವುದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜ್ಞಾನದಂತಹ ವಿಷಯ ಅರಿತು ಕೊಳ್ಳಬೇಕು. ಪರಿಸರವಿಲ್ಲದೆ ಜೀವಿಗಳಿಲ್ಲ. ಮನುಷ್ಯನ ಬದುಕು ಅಡಗಿರುವುದು ಪರಿಸರದಲ್ಲಿ. ಅದನ್ನು ಜೋಪಾನವಾಗಿ ನೋಡಿ ಕೊಳ್ಳ ಬೇಕಿರುವುದು ಎಲ್ಲರ ಜವಾಬ್ದಾರಿ ಎಂದರು.

ಪರಿಸರ ಮತ್ತು ವನ್ಯಜೀವಿ ಹಿತ ರಕ್ಷಣಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಎನ್. ಬನ್ನೇರುಘಟ್ಟ ಮಾತಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ, ವನ್ಯಜೀವಿ ಬಗ್ಗೆ ಅರಿವಿನ ಕೊರತೆ ಇದೆ. ಹಾಗಾಗಿ ಅವರಲ್ಲಿ ಅರಿವು ಮೂಡಿಸಲು ಸಂಸ್ಥೆ ಇಂತಹ ಸ್ಪರ್ಧೆ ಏರ್ಪಡಿಸಿದೆ ಎಂದು ತಿಳಿಸಿದರು.

10 ವರ್ಷಗಳಿಂದ ಸಂಸ್ಥೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಚಿತ್ರಕಲೆ, ಪ್ರಬಂಧ, ಆಶುಭಾಷಣ ಸ್ಪರ್ಧೆ ನಡೆಸಿಕೊಂಡು ಬರಲಾಗುತ್ತಿದೆ. ವಿಜೇತರಿಗೆ ಪರಿಸರ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುತ್ತಿದ್ದು, ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದರು.

ತಾಲೂಕಿನ 16 ಶಾಲೆಗಳಿಂದ 200 ವಿದ್ಯಾರ್ಥಿಗಳು, ಆಶುಭಾಷಣ ಸ್ಪರ್ಧೆಗೆ 7 ಕಾಲೇಜುಗಳಿಂದ ಸುಮಾರು 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಾದವರಿಗೆ ಜೂ.25 ರಂದು ಪಟ್ಟಣದ ಶೀರಾಮ ಕುಟೀರದಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *